ಮೈಸೂರು: ಕಿಚ್ಚ ಸುದೀಪ್ ಅವರ ಕಿಚ್ಚು ಕಾಂಗ್ರೆಸ್ ಕಚೇರಿಯನ್ನೇ ಸುಟ್ಟು ಹಾಕ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಭಾನುವಾರ ನಂಜನಗೂಡಿನಲ್ಲಿ (Nanjanagudu) ಬಿಜೆಪಿ (BJP) ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪರವಾಗಿ ಪ್ರಚಾರಕ್ಕೆ ಇಳಿಯುವ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಟ ಸುದೀಪ್ ಅವರು ಕಾಂಗ್ರೆಸ್ ಕಚೇರಿಗೆ ಕಿಚ್ಚು ಹಚ್ಚಿದ್ದಾರೆ. ಕಿಚ್ಚ ಸುದೀಪ್ ಅವರ ಕಿಚ್ಚು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿಯನ್ನು ಸುಟ್ಟು ಹಾಕುತ್ತಿದೆ. ಹೀಗಾಗಿ ನಾಯಕರ ರ‍್ಯಾಲಿಗೆ ಲಕ್ಷಾಂತರ ಜನ ರಾಜ್ಯದ ಉದ್ದಗಲಕ್ಕೂ ಬರುತ್ತಿದ್ದಾರೆ. ಈ ವಾತಾವರಣ ಗಮನಿಸಿದರೆ ಕರ್ನಾಟಕದಲ್ಲಿ ಈ ಬಾರಿ ನಿಶ್ಚಿತವಾಗಿ ಡಬಲ್ ಎಂಜಿನ್ ಸರ್ಕಾರ ಸ್ಥಾಪನೆಯಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಿಗೆ (Siddaramaiah) ಟಿಪ್ಪು ಸುಲ್ತಾನನ ಜನ್ಮದಿನ ಗೊತ್ತು, ಹನುಮನ ಜನ್ಮದಿನ ಗೊತ್ತಿಲ್ಲ. ರಾಮನಗರದ ಶಿವ ಬೆಟ್ಟವನ್ನು ಡಿ.ಕೆ ಶಿವಕುಮಾರ್ (D.K Shivakumar) ಏಸು ಬೆಟ್ಟ ಮಾಡಿದ್ದಾರೆ. ಅವರ ಪಕ್ಷದ ಸಿದ್ದರಾಮಯ್ಯ ಹನುಮ ಜನ್ಮದಿನವನ್ನು ಪ್ರಶ್ನಿಸುತ್ತಾರೆ. ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರ್ಕಾರದಂತೆ ಇಲ್ಲೂ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸೀತೆ ಯಾರು, ಶೂರ್ಪನಖಿ ಯಾರು ಅಂತಾ ಎಲ್ಲರಿಗೂ ಗೊತ್ತಿದೆ: ಶೋಭಾ ವಾಗ್ದಾಳಿ
ಬಿಜೆಪಿ ಹೆಚ್ಚಿಸಿರುವ ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿತ್ತುಕೊಳ್ಳುತ್ತದೆ. ಲಿಂಗಾಯತ ಸಿಎಂಗಳು ಭ್ರಷ್ಟರು ಎನ್ನುವ ಸಿದ್ದರಾಮಯ್ಯ ಅವರಿಗೆ ಲಿಂಗಾಯತರು ಪಾಠ ಕಲಿಸಬೇಕು. ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುವ ಬಸವ ಅನುಯಾಯಿಗಳ ಸಿಎಂಗಳನ್ನು ಸಿದ್ದರಾಮಯ್ಯ ಭ್ರಷ್ಟರು ಎನ್ನುತ್ತಾರೆ. ಇದನ್ನು ಲಿಂಗಾಯತರು ಸಹಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈಗ ಲಿಂಗಾಯತರ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳುವುದು ನೋಡಿದರೆ, ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ ಕಾಣುತ್ತದೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಅವರಿಗೆ ಸ್ವಜಾತಿ ಮೇಲೆ ಮಾತ್ರ ಪ್ರೀತಿ. ಇದರಿಂದ ಅವರು ಕಾಂಗ್ರೆಸ್‍ಗೆ ಭಸ್ಮಾಸುರ ಆಗಿದ್ದಾರೆ. 2013 ರಲ್ಲಿ ಜಿ. ಪರಮೇಶ್ವರ್ ಅವರನ್ನು ಸೋಲಿಸಲು ಹೆಚ್. ವಿಶ್ವನಾಥ್ ಅವರನ್ನು ಎರಡು ಬಾರಿ ಸ್ಪೆಷಲ್ ಹೆಲಿಕಾಪ್ಟರ್‍ನಲ್ಲಿ ಕಳಿಸಿದ್ದರು. ಅಲ್ಲದೆ ಅವರು ದೇವೇಗೌಡರಿಗೆ ದ್ರೋಹ ಬಗೆದಿದ್ದಾರೆ. ಅವರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜರಾಜೇಶ್ವರಿನಗರದಲ್ಲಿ ಸಚಿವ ಮುನಿರತ್ನ ಪರ ಸುದೀಪ್ ಅಬ್ಬರದ ಪ್ರಚಾರ