ಇಂದು ಮಧ್ಯಾಹ್ನ 12 ಗಂಟೆಗೆ ನಿರ್ಮಾಪಕಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ (Geetha) ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ಗೆ ರಾಜಕೀಯ ಹೊಸದೇನೂ ಅಲ್ಲವಾದರೂ, ಕಾಂಗ್ರೆಸ್ ಪಕ್ಷಕ್ಕೆ ಇದೇ ಮೊದಲ ಬಾರಿಗೆ ಸೇರ್ಪಡೆ ಆಗುತ್ತಿದ್ದಾರೆ. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಶಿವರಾಜ್ ಕುಮಾರ್.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ‘ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮ ನಾಯಕ್ ಸಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
ಮುಂದುವರೆದು ಮಾತನಾಡಿದ ಶಿವರಾಜ್ ಕುಮಾರ್ (Shivaraj Kumar), ‘ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೊದು ಬೇಡ. ತಾಯಿ ಹೋದ ಬಳಿಕ ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತೆ. ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಮಾಡುತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಅವೇರ್ ನೆಸ್ ಕೂಡ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ’ ಎಂದು ಹೇಳಿದರು.
ಗೀತಾ ಶಿವರಾಜ್ ಕುಮಾರ್ ರ ಕಿರಿಯ ಸಹೋದರ ಮಧು ಬಂಗಾರಪ್ಪ (Madhu Bangarappa) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ (Kumar Bangarappa) ಅವರ ವಿರುದ್ಧವೇ ಸೊರಬ (Soraba) ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.