ಪತ್ನಿಯನ್ನು ಸ್ಕ್ಯಾನ್ ಮಾಡಲು 15 ನಿಮಿಷ ತೆಗೆದುಕೊಂಡಿದ್ದಕ್ಕೆ ಸಂಶಯಪಟ್ಟು ಹತ್ಯೆಗೆ ಸುಪಾರಿ ಕೊಟ್ಟ ಪತಿ

Public TV
2 Min Read
Yadgiri

ಯಾದಗಿರಿ: ಹೆಂಡತಿಯನ್ನು (Wife) ಆರೋಗ್ಯ ತಪಾಸಣೆಗಾಗಿ ಸ್ಕ್ಯಾನಿಂಗ್ ಸೆಂಟರ್‌ಗೆ (Scanning Center) ಕರೆದುಕೊಂಡು ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಮೇಲೆ ಸಂಶಯಪಟ್ಟ ಪತಿ (Husband) ಆತನ ಹತ್ಯೆಗೆ ಸುಪಾರಿ ನೀಡಿದ್ದ. ಆದರೆ ಹತ್ಯೆಗೂ ಮುನ್ನವೇ ಸುಪಾರಿ ಪಡೆದಿದ್ದಾತನೊಂದಿಗೆ ಪತಿಯೂ ಸಹ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಯಾದಗಿರಿ (Yadgiri) ನಗರ ಪೊಲೀಸ್ ಠಾಣೆಯ ಪೊಲೀಸರು ಎಚ್ಚೆತ್ತುಕೊಂಡು ಕೊಲೆಗೆ ಹೊಂಚು ಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಇದರಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ನೇತೃತ್ವದ ತಂಡ ಓರ್ವನ ಪ್ರಾಣ ಕಾಪಾಡಿದಂತಾಗಿದೆ.

crime 1

ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾ ಗ್ರಾಮದ ನಾನ್ಯಾ ನಾಯಕ್ ಕಳೆದ 8 ತಿಂಗಳ ಹಿಂದೆ ತನ್ನ ಹೆಂಡತಿಯನ್ನು ತಪಾಸಣೆಗಾಗಿ ಯಾದಗಿರಿ ನಗರದ ಶಿವಸಾಯಿ ಸ್ಕ್ಯಾನ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದ. ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ನಾನ್ಯಾ ನಾಯಕನ ಹೆಂಡತಿಯನ್ನು 15 ನಿಮಿಷಗಳ ಕಾಲ ತಪಾಸಣೆ ಮಾಡಿದ್ದಾನೆ. ಇದರಿಂದ ನಾಯಕ್ ತನ್ನ ಹೆಂಡತಿ ಇಷ್ಟು ಸಮಯ ಒಳಗಡೆ ಇರುವುದಕ್ಕೆ ಸುರೇಶ್‌ನ ಮೇಲೆ ಸಂಶಯ ಪಟ್ಟಿದ್ದಾನೆ. ಇದೇ ಕಾರಣಕ್ಕೆ ಸುರೇಶ್‌ನನ್ನು ಕೊಲ್ಲಲು ಕಳೆದ 8 ತಿಂಗಳಿಂದ ಪರಿತಪಿಸುತ್ತಿದ್ದ.

ನಾನ್ಯಾ ನಾಯಕ್ ಬೆಂಗಳೂರಿನಲ್ಲಿದ್ದ ತನ್ನ ಪರಿಚಯಸ್ಥನಿಗೆ ಸ್ಕ್ಯಾನ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸುರೇಶ್‌ನ ಹತ್ಯೆಗೆ 50 ಸಾವಿರ ರೂ. ಹಣ ಹಾಗೂ ಬಂಗಾರದ ಉಂಗುರ ನೀಡಿದ್ದ. ಅದರಂತೆ ಸುಪಾರಿ ಪಡೆದಿದ್ದಾತ ಪುಣೆಯಲ್ಲಿ ಕಂಟ್ರಿ ಪಿಸ್ತೂಲ್, ಚಾಕು, ಪಂಚ್ ಖರೀದಿಸಿ ಸುರೇಶ್‌ನನ್ನು ಹತ್ಯೆ ಮಾಡಲು ಏಪ್ರಿಲ್ 20ರಂದು ಯಾದಗಿರಿ ನಗರದ ಲಾಡ್ಜ್ ಒಂದರಲ್ಲಿ ಹೊಂಚು ಹಾಕಿ ಕುಳಿತಿದ್ದ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

POLICE JEEP 1

ಚುನಾವಣೆ ಹಿನ್ನೆಲೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್‌ಐ ದೇವೇಂದ್ರ ರೆಡ್ಡಿ ಹಾಗೂ ಸಿಬ್ಬಂದಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ತೊದಲುತ್ತಿದ್ದುದನ್ನು ಗಮನಿಸಿದ ಪಿಎಸ್‌ಐ ಆತ ಉಳಿದುಕೊಂಡಿದ್ದ ಲಾಡ್ಜ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ.

ಈ ವೇಳೆ ಆತನ ರೂಮ್‌ನಲ್ಲಿ ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು, ಬಟನ್ ಚಾಕು, ಪಂಚ್ ಪತ್ತೆಯಾಗಿವೆ. ಇದನ್ನು ವಶಪಡಿಸಿಕೊಂಡು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸುಪಾರಿ ನೀಡಿದ ನಾನ್ಯಾ ನಾಯಕ್‌ನನ್ನು ಹಾಗೂ ಹತ್ಯೆಗೆ ಸುಪಾರಿ ಪಡೆದವನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಯಾದಗಿರಿ ವಿಭಾಗದ ಡಿವೈಎಸ್‌ಪಿ ಬಸವೇಶ್ವರ, ನಗರ ಠಾಣೆ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ದೇವಿಂದ್ರ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡದಕ್ಕೆ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Share This Article