ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವಾಗಲೇ ಪ್ರಚಾರ ನಡೆಸುತ್ತಿರುವುದನ್ನು ಪಬ್ಲಿಕ್ ಟಿವಿ ವರದಿ ಮಾಡಿದ್ದ ಬೆನ್ನಲ್ಲೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದ ಎಸಿಬಿ (ACB) ಸಿಪಿಐ ದೇವೇಂದ್ರಪ್ಪ ಕುಣೆಬೆಳಕೆರೆ, ಈಗ ಯಾವ ಪಕ್ಷದಲ್ಲೂ ಟಿಕೆಟ್ ಸಿಗದೇ ಮತ್ತೆ ಪೊಲೀಸ್ ಇಲಾಖೆಯ ಹುದ್ದೆಗೆ ಮರಳಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು ಹಲವಾರು ಚರ್ಚೆಗೆ ಕಾರಣವಾಗಿದೆ.
ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihar) ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ನಿರ್ಧಾರದಿಂದ ದೇವೇಂದ್ರಪ್ಪ ಕುಣೆಬೆಳಕೆರೆ 2018 ರಲ್ಲಿ ಕೋಲಾರದಲ್ಲಿ ಎಸಿಬಿ ಸಿಪಿಐ ಆಗಿ ಕೆಲಸ ಮಾಡುತ್ತಲೇ ಮಾಜಿ ಸಚಿವ ಜನಾರ್ದನರೆಡ್ಡಿಯವರ ಜೊತೆ ಹರಿಹರದಲ್ಲಿ ಪ್ರಚಾರ ಶುರು ಮಾಡಿದ್ದರು. ಇದರ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರ ಮಾಡಿತ್ತು. ನಂತರ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯವಾಗಿ ರಾಜಕೀಯಕ್ಕೆ ಇಳಿದಿದ್ದರು. ಆಗ ಬಿಜೆಪಿಯಿಂದ ಟಿಕೆಟ್ ಕೈತಪ್ಪಿತ್ತು. ಕೆಲ ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ನಂತರ ಕಳೆದ ಒಂದು ವರ್ಷದ ಕೆಳಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಲಾಬಿ ನಡೆಸುತ್ತಿದ್ದರು. ಇದನ್ನೂ ಓದಿ: ಬರೊಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ
ಈ ಚುನಾವಣೆಯ ಕಾಂಗ್ರೆಸ್ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದ ದೇವೇಂದ್ರಪ್ಪ ಅವರು ಎಲ್ಲರ ಜತೆಗೂ ಮಾತುಕತೆ ನಡೆಸಿದ್ದರು. ಆದರೆ, ಕಾಂಗ್ರೆಸ್ (Congress) ಕೂಡಾ ಅವರಿಗೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ರಾಜೀನಾಮೆ ನೀಡಿದ್ದ ದೇವೇಂದ್ರಪ್ಪ ಈಗ ಮತ್ತೆ ಯಾದಗಿರಿ (Yadgir) ಜಿಲ್ಲೆಯ ಡಿ.ಎಸ್.ಬಿ ಠಾಣೆಯ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ದೇವೇಂದ್ರಪ್ಪ ಅವರು ಐದು ವರ್ಷದ ಬಳಿಕ ಹೇಗೆ ಪೊಲೀಸ್ ಇಲಾಖೆಗೆ ವಾಪಸ್ ಆದರು ಎನ್ನುವುದು ಜನರ ಪ್ರಶ್ನೆ. ಐದು ವರ್ಷ ರಾಜಕಾರಣ ಮಾಡಿ, ಪುನಃ ಪೊಲೀಸ್ ಇಲಾಖೆಗೆ ಸೇರಬಹುದಾ? ಎಂದು ಜನರು ಪ್ರಶ್ನೆ ಎತ್ತಿದ್ದಾರೆ. ದೇವೇಂದ್ರಪ್ಪ ಅವರು ಐದು ವರ್ಷ ಕಾಲ ರಜೆಯಲ್ಲಿದ್ದರಾ? ಎನ್ನುವುದು ಇನ್ನೊಂದು ಪ್ರಶ್ನೆ, ಕೆಲವು ಇಲಾಖೆಗಳಲ್ಲಿ ಸೂಕ್ತ ಕಾರಣ ನೀಡಿದರೆ ಸುದೀರ್ಘ ಕಾಲ ವೇತನ ರಹಿತ ರಜೆಯ ಅವಕಾಶವೂ ಇರುತ್ತದೆ. ಅದನ್ನು ದೇವೇಂದ್ರಪ್ಪ ಅವರು ಬಳಸಿಕೊಂಡಿದ್ದಾರಾ? ಎಂದು ಜನ ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸಿದ ಯಡಿಯೂರಪ್ಪ