ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?

Public TV
1 Min Read
sogadu shivanna hd kumaraswamy

ತುಮಕೂರು: ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ (BJP) ವಿರುದ್ಧ ಸಿಟ್ಟಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣ (Sogadu Shivanna) ಜೆಡಿಎಸ್‌ (JDS) ಸೇರ್ಪಡೆಯಾಗುವ ಸಾಧ್ಯತೆಯಿದೆ.

ತುಮಕೂರು (Tumakuru) ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಸೊಗಡು ಶಿವಣ್ಣ ಇಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಜೆಡಿಎಸ್ ಸೇರುವ ಬಗ್ಗೆ ಸೊಗಡು ಶಿವಣ್ಣ ಖಚಿತ ಪಡಿಸುವ ಸಾಧ್ಯತೆಯಿದೆ. ಸೊಗಡು ಶಿವಣ್ಣಗೆ ಟಿಕೆಟ್‌ ನೀಡಿದರೆ ತುಮಕೂರು ನಗರದಲ್ಲೂ ಜೆಡಿಎಸ್‌ ಅಭ್ಯರ್ಥಿ ಬದಲಾವಣೆಯಾಗುವ ಸಾಧ್ಯತೆಯಿದೆ. ಆದರೆ ಈಗಾಗಲೇ ಜೆಡಿಎಸ್‌ ಅಭ್ಯರ್ಥಿಯಾಗಿ ಗೋವಿಂದರಾಜು ಪ್ರಚಾರ ಆರಂಭಿಸಿದ್ದಾರೆ.

ಸತತ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈ ಬಾರಿ ಟಿಕೆಟ್‌ ನನಗೆ ನೀಡಲೇಬೇಕೆಂದು ಶಿವಣ್ಣ ಪಟ್ಟುಹಿಡಿದಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಟಿಕೆಟ್ ನೀಡಿತ್ತು.  ಇದನ್ನೂ ಓದಿ: ಬೊಮ್ಮಾಯಿ ಬಳಿ ಸ್ವಂತ ಕಾರು ಇಲ್ಲ: ಆಸ್ತಿ ಎಷ್ಟಿದೆ?


ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೇ ತುಮಕೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸೊಗಡು ಶಿವಣ್ಣ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಈಗ ರಾಜಕೀಯಕ್ಕೆ ಬೇಕಾಗಿರುವುದು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಂದು ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ‌. ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕಾ? ಇಲ್ಲ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡಬೇಕೇ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

Share This Article