ವಿ.ಮನೋಹರ್ ಸಂಗೀತದ ಚುನಾವಣೆ ಹಾಡಿಗೆ ಉಪೇಂದ್ರ ಗಾಯಕ

Public TV
2 Min Read
V. Manohar and upendra

ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ  ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ ದರ್ಬಾರ್ (Darbar). ಸತೀಶ್ ನಾಯಕನಾಗಿ ಕಾಣಿಸಿಕೊಂಡಿರುವ  ಈ ಚಿತ್ರಕ್ಕೆ  ವಿ.ಮನೋಹರ್ (V. Manohar) ಆಕ್ಷನ್ ಕಟ್ ಹೇಳಿದ್ದಾರೆ. ಈಚೆಗೆ ನಡೆದ  ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ (Upendra)ದನಿಯಾಗಿರುವ ಚುನಾವಣೆ (Election) ಪ್ರಕ್ರಿಯೆಯನ್ನು ವಿಶ್ಲೇಶಿಸುವ ವಿಶೇಷ ಹಾಡಿನ (Song) ಲಿರಿಕಲ್ ವೀಡಿಯೋವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ರಿಲೀಸ್ ಮಾಡಿದರು.

Darbar 1

ಈ ವೇಳೆ ಮಾತನಾಡಿದ ನಟ ಸತೀಶ್ ‘ನಮ್ಮ  ಚಿತ್ರದಲ್ಲಿರುವ 3 ಹಾಡುಗಳೂ ವಿಶೇಷವಾಗಿವೆ. ಮೊದಲ ಹಾಡು ‘ಯಾರಿವ ಯಾರಿವ’ ನಾಯಕನ ಹಿನ್ನೆಲೆ ಹೇಳುವ ಸಾಂಗ್ ಆಗಿದ್ದು ಮನೋಹರ್ ಅವರೇ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. 2ನೇ ಹಾಡು ಮೆಲೋಡಿ. ಇದಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಇನ್ನು ಮೂರನೇ ಹಾಡು ಎಲೆಕ್ಷನ್ ರಾಜಕೀಯದ ಬಗ್ಗೆ ವಿವರಿಸುವುದಾಗಿದೆ. ಇದನ್ನು ನಾನೇ ಬರೆದಿದ್ದೇನೆ. ಅದರಲ್ಲಿ ತುಂಬಾನೇ ವಿಷಯಗಳು ಅಡಗಿವೆ.  ನಾನು ಪ್ರತಿ ಲೈನ್ ಬರೆದಾಗಲೂ ಮನೋಹರ್ ಅವರು ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾ ಬಂದರು. ಇರುವ ಸಾಹಿತ್ಯಕ್ಕೆ ಟ್ಯೂನ್ ಹಾಕುವುದು ತುಂಬಾ  ಚಾಲೆಂಜಿಂಗ್ ಕೆಲಸ ಅಂತ ನನಗೂ ಗೊತ್ತು. ಅದನ್ನೆಲ್ಲ ಮನೋಹರ್ ಅವರು ನಿಭಾಯಿಸಿದ್ದಾರೆ,  ನಾನು ಹೊರಗಿನ ಸಿಂಗರ್ ಕರೆಸೋಣ ಎಂದಾಗ ಮನೋಹರ್ ಅವರು ಬೇಡ, ನಮ್ಮವರಿಂದಲೇ ಹಾಡಿಸೋಣವೆಂದು ಹೇಳಿದರು. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಬಂದಿದೆ’ ಎಂದರು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ

V. Manohar

ನಾಯಕಿ ಜಾಹ್ನವಿ ಮಾತನಾಡಿ ‘ಈ ಚಿತ್ರದಲ್ಲಿ ನಾನು ಅಪ್ಪರ್ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದೇನೆ. ಆಕೆ ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ಹೀರೋ ಜತೆ  ಸ್ನೇಹ ಆಗಿ ಪ್ರೀತಿ ಬೆಳೆಯುತ್ತದೆ. ಲೈಫ್ ಪಾರ್ಟ್ನರ್ ಆಗಿ ನಾಯಕನ ಗುರಿ ಸಾಧಿಸಲು ಬೆನ್ನೆಲುಬಾಗಿ ನಿಲ್ಲುತ್ತೇನೆ ‘ಎಂದರು.

Darbar 2

ನಿರ್ದೇಶಕ ವಿ.ಮನೋಹರ್ ಮಾತನಾಡಿ,  ‘ಸತೀಶ್ ತಮ್ಮ ಚಿತ್ರವೊಂದಕ್ಕೆ ಹಾಡು ಬರೆಸಲು ಬಂದಾಗ ಸ್ನೇಹಿತರಾದರು. ಇದಕ್ಕೂ  ಮುಂಚೆ ನಿರ್ದೇಶನದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆಗಲಿಲ್ಲ, ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆಯಿದು. ನನಗೂ ಹಳ್ಳಿ ರಾಜಕೀಯದ ಬಗ್ಗೆ  ಆಸಕ್ತಿಯಿತ್ತು. ಹಾಗಾಗಿ  ನಾನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ  ಈ ಚಿತ್ರಕ್ಕೆ  ಶೂಟ್ ಮಾಡಿದಾಗ ಅಲ್ಲಿನ ಜನರೂ ನಮಗೆ ತುಂಬಾ ಸಹಕಾರ ನೀಡಿದರು’ ಎಂದರು.

Darbar 3

ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ.  ಮಾಸ್ ಮಾದ, ವಿನೋದ್ ಅವರ ಸಾರಥ್ಯದ 3 ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Share This Article