ನ್ಯಾಯಾಧೀಶರ ಮುಂದೆ ಪುನೀತ್ ಕೆರೆಹಳ್ಳಿ ಹಾಜರು – ಮತ್ತೆ 7 ದಿನ ಕಸ್ಟಡಿಗೆ ಪಡೆದ ಪೊಲೀಸರು

Public TV
1 Min Read
puneeth kerehalli

ರಾಮನಗರ: ಗೋಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ (Puneet Kerehalli) ಸೇರಿದಂತೆ ಒಟ್ಟು 5 ಮಂದಿಯನ್ನು ಕನಕಪುರ ಜೆಎಂಎಫ್‌ಸಿ ನ್ಯಾಯಾಲಯ ಏಳು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.

ರಾಷ್ಟ್ರೀಯ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ಗೋಪಿ, ಪವನ್ ಕುಮಾರ್, ಪಿಲ್ಲಿಂಗ್ ಅಂಬಿಗಾರ್, ಸುರೇಶ್ ಅವರನ್ನು ನಾಲ್ಕು ದಿನಗಳ ಹಿಂದೆ ರಾಜಸ್ಥಾನದಲ್ಲಿ ಬಂಧಿಸಿದ್ದ ಸಾತನೂರು ಪೊಲೀಸರು ಭಾನುವಾರ ಕನಕಪುರ ಜೆಎಂಎಫ್‌ಸಿ ನ್ಯಾಯಾಧೀಶ ಅಪ್ಪಣ್ಣ ಸವದಿ ಅವರ ಮನೆಯಲ್ಲಿ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಐವರು ಆರೋಪಿಗಳನ್ನು ಸಾತನೂರು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ‌ಇದನ್ನೂ ಓದಿ: ಯಾದಗಿರಿಯಲ್ಲಿ ಖಾಸಗಿ ಬಸ್ ಪಲ್ಟಿ – ಓರ್ವ ಸಾವು, ಹಲವರಿಗೆ ಗಂಭೀರ ಗಾಯ

PUNEETH KEREHALLI 1

ಮಾರ್ಚ್ 31ರಂದು ರಾಮನಗರ ಜಿಲ್ಲೆ ಕನಕಪುರದ ಸಾತನೂರು ಸಮೀಪ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಒಂದನ್ನು ತಡೆದಿದ್ದ ಪುನೀತ್ ಕೆರೆಹಳ್ಳಿ ಮತ್ತವರ ಗುಂಪು, ಜಾನುವಾರುಗಳನ್ನು ರಕ್ಷಣೆ ಮಾಡಿದ್ದರು. ಆ ಕ್ಯಾಂಟರಿನೊಳಗಿದ್ದ ಇದ್ರೀಷ್ ಪಾಷಾ ಎಂಬವರು ಏಪ್ರಿಲ್ 1ರಂದು ಘಟನೆ ನಡೆದ ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದರು. ಈ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ವಿಪಕ್ಷಗಳೂ ಸೇರಿದಂತೆ ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪುನೀತ್‌ ಕೆರೆಹಳ್ಳಿ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ತನಿಖೆ ಕೈಗೊಂಡಿದ್ದ ಪೊಲೀಸರು ಪುನೀತ್‌ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article