ಭವಾನಿಗೆ ಟಿಕೆಟ್ ಮಿಸ್ ಆದ್ರೆ ಕೆಆರ್ ಪೇಟೆ ಮೇಲೂ ಪ್ರಭಾವ?

Public TV
2 Min Read
Bhavani Revanna Swaroop

ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ಅಖಾಡ ಗರಿಗೆದರಿದೆ. ಅದರಲ್ಲೂ ಹಾಸನ (Hassan) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಟಿಕೆಟ್ ಹಂಚಿಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ಫುಲ್ ಸೌಂಡ್ ಮಾಡ್ತಾ ಇದೆ. ಇಲ್ಲಿ ಭವಾನಿ ರೇವಣ್ಣ (Bhavani Revanna) ಬದಲಿಗೆ ಸ್ವರೂಪ್‌ಗೆ ‌(Swaroop) ಟಿಕೆಟ್ ನೀಡಿದರೆ ಕೇವಲ ಹಾಸನದಲ್ಲಿ ಮಾತ್ರವಲ್ಲ ಕೆಆರ್ ಪೇಟೆ (KR Pete) ಕ್ಷೇತ್ರದಲ್ಲಿ ಜೆಡಿಎಸ್ ಮೇಲೆ ಪ್ರಭಾವ ಬೀರಲಿದೆ.

ಕಳೆದ 1-2 ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ವಿಚಾರ. ಹಾಸನದಿಂದ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಇಬ್ಬರು ರಾಜಿಯಾಗದ ಕಾರಣ ಟಿಕೆಟ್ ಬಿಕ್ಕಟ್ಟಿನ ಫೈಟ್ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಇದೇ ಶುಕ್ರವಾರ ದೇವೇಗೌಡರ ಸಮ್ಮುಖದಲ್ಲಿ ಇತಿಶ್ರೀ ಹಾಡಿ, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಮಾಡಲಾಗುತ್ತೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

BHAVANI REVANNA

ಒಂದು ವೇಳೆ ಹಾಸನದಿಂದ ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‌ಗೆ ನೀಡಿದ್ದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ನಲ್ಲಿ ಒಂದಷ್ಟು ಡ್ಯಾಮೇಜ್ ಆಗೋದು ಗ್ಯಾರಂಟಿ. ಈ ಡ್ಯಾಮೇಜ್ ಕೇವಲ ಹಾಸನ ಕ್ಷೇತ್ರದಲ್ಲಿ ಮಾತ್ರವಲ್ಲ ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಮಸ್ಯೆ ಎದುರಾಗೋದು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

ಏಕೆಂದರೆ ಕೆಆರ್ ಪೇಟೆ ಕ್ಷೇತ್ರದ ಮೇಲೆ ರೇವಣ್ಣ ಅವರ ಹಿಡಿತವಿದೆ. ಈಗಾಗಲೇ ಕೆಆರ್ ಪೇಟೆ ಜೆಡಿಎಸ್ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ರೇವಣ್ಣ ಆಪ್ತರಿಗೆ ಟಿಕೆಟ್ ನೀಡದೇ ಹೆಚ್‌ಡಿಕೆ ತಮ್ಮ ಆಪ್ತರಾಗಿರುವ ಹೆಚ್‌ಡಿ ಮಂಜುಗೆ ಟಿಕೆಟ್ ನೀಡಿದ್ದಾರೆ. ಈ ವಿಚಾರದಲ್ಲಿ ಬೇಸರಗೊಂಡು ರೇವಣ್ಣ ಆಪ್ತರಾದ ಬಿಎಲ್ ದೇವರಾಜು, ಬಸ್ ಕೃಷ್ಣೇಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದ್ದಾರೆ.

HD KUMARASWAMY HD REVANNA

ಹೀಗಿರುವಾಗ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದ್ರೆ, ರೇವಣ್ಣ ಬಯಸಿದ ಹಾಗೆ ಕೆಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ಆಪ್ತನಿಗೆ ಹಾಗೂ ಹಾಸನ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಕೊಡಿಸದಂತೆ ಆಗುತ್ತದೆ. ಹೀಗಾಗಿ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ರೇವಣ್ಣ ಬೆಂಬಲಿಗರು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡದೇ ಇರಬಹುದು. ಇದೇ ಕಾರಣಕ್ಕೋ ಏನೋ ಕುಮಾರಸ್ವಾಮಿ ಕಳೆದ 2 ದಿನಗಳ ಹಿಂದೆ ಕೆಆರ್ ಪೇಟೆ ಭಾಷಣದ ವೇಳೆ, ನಮ್ಮ ನೆಂಟರೇ ಈ ಕ್ಷೇತ್ರಕ್ಕೆ ಬರಬಹುದು. ಅವರು ಬಂದು ಜೆಡಿಎಸ್ ಅಭ್ಯರ್ಥಿ ಸೋಲಿಸಿ ಎಂದು ಹೇಳಬಹುದು. ಅವರ ಕುತಂತ್ರಗಳಿಗೆ ಯಾರು ಒಳಗಾಗಬೇಡಿ ಎಂದು ಹೇಳಿದ್ದರು.

ಒಟ್ಟಾರೆ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದರೆ ಹಾಸನ ಕ್ಷೇತ್ರದ ಜೊತೆಗೆ ಕೆಆರ್ ಪೇಟೆ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಪೆಟ್ಟು ಬೀಳಬಹುದು. ಅದೇ ಕಾರಣಕ್ಕೆ ಕುಮಾರಸ್ವಾಮಿ ಮೊದಲೇ ನಿರೀಕ್ಷಣಾ ಜಾಮೀನು ಹಾಕಿಕೊಂಡಿರಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

Share This Article