ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್

Public TV
1 Min Read
afghanistan

ಕಾಬೂಲ್: ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳಾ ಚಾಲಿತ ರೇಡಿಯೊ ಕೇಂದ್ರವನ್ನು (Radio Station) ಮುಚ್ಚಲಾಗಿದೆ.

ವರದಿಗಳ ಪ್ರಕಾರ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಡಿಯೊ ಸ್ಟೇಷನ್ ‘ಸದಾಯ್ ಬನೋವನ್’ ಮುಸ್ಲಿಮರ ಪವಿತ್ರ ರಂಜಾನ್ (Ramadan) ತಿಂಗಳಿನಲ್ಲಿ ಸಂಗೀತವನ್ನು ನುಡಿಸಿದೆ ಎಂದು ತಾಲಿಬಾನ್ (Taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇಡಿಯೋ ಸ್ಟೇಷನ್‌ನಲ್ಲಿ 8 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರಲ್ಲಿ 6 ಮಂದಿ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ.

taliban

ಇತ್ತೀಚೆಗೆ ರಂಜಾನ್ ಸಮಯದಲ್ಲಿ ಸಂಗೀತಗಳನ್ನು ಪ್ರಸಾರ ಮಾಡುವ ಮೂಲಕ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ. ಈ ಉಲ್ಲಂಘನೆಯ ಕಾರಣದಿಂದ ರೇಡಿಯೋ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ

ಈ ರೇಡಿಯೋ ಸ್ಟೇಷನ್ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ ಮತ್ತು ಅಂತಹದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ನಾವು ಅದನ್ನು ಮತ್ತೆ ಕಾರ್ಯನಿರ್ವಹಿಸಲು ಅನುಮತಿಸುತ್ತೇವೆ ಎಂದು ಅಹ್ಮದಿ ತಿಳಿಸಿದ್ದಾರೆ.

taliban afghanistan

ಈ ನಡುವೆ ರೇಡಿಯೋ ಸ್ಟೇಷನ್‌ನ ಮುಖ್ಯಸ್ಥರು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ರೇಡಿಯೋ ಸ್ಟೇಷನ್ ಅನ್ನು ಮುಚ್ಚುವ ಅಗತ್ಯವೇ ಇರಲಿಲ್ಲ. ನಾವು ಸಂಗೀತವನ್ನು ಪ್ರಸಾರ ಮಾಡಿರುವುದಾಗಿ ತಾಲಿಬಾನ್ ಹೇಳಿದೆ. ಆದರೆ ನಾವು ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನವನ್ನು 2021ರಲ್ಲಿ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆರಂಭದಲ್ಲಿ ಮೃದುವಾಗಿಯೇ ಆಡಳಿತದ ಭರವಸೆಯನ್ನು ನೀಡಿತ್ತು. ಆದರೆ ಬಳಿಕ ನಿಧಾನವಾಗಿ ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ತಾಲಿಬಾನ್ ಕಸಿದುಕೊಳ್ಳಲು ಪ್ರಾರಂಭಿಸಿತು. ಇದಕ್ಕೆ ಉದಾಹರಣೆ ಎಂಬಂತೆ ಪಾರ್ಕ್, ಜಿಮ್ ಹಾಗೂ ಸರ್ವಜನಿಕ ಸ್ನಾನಗೃಹಗಳಿಂದ ಮಹಿಳೆಯರನ್ನು ನಿಷೇಧಿಸಲಾಯಿತು. ಇಷ್ಟು ಮಾತ್ರವಲ್ಲದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ವಿಶ್ವವಿದ್ಯಾನಿಲಯಗಳಿಗೆ ಹೋಗುವುದನ್ನೂ ತಡೆಯಲಾಯಿತು. ಇದು ದೇಶದ ಯುವಜನರಲ್ಲಿ ಹಾಗೂ ಅಂತಾರಾಷ್ಟ್ರೀಯವಾಗಿ ಖಂಡನೆಗೆ ಗುರಿಯಾಯಿತು. ಇದನ್ನೂ ಓದಿ: Naxals killed: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್‌ಗೆ 5 ನಕ್ಸಲರು ಬಲಿ

Share This Article