ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಸೃಷ್ಟಿಸಿರುವ ವಿಧಾನಸಭಾ ಕ್ಷೇತ್ರವೆಂದರೆ ಅದು ಚಿಕ್ಕಬಳ್ಳಾಪುರ. ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್ (Dr Sudhakar) ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ (Chikkabalalpura Constiency) ಸಹಜವಾಗಿಯೇ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನು ಕಣಕ್ಕಿಳಿಸಿ ತೊಡೆತಟ್ಟಲು ಅಣಿಯಾಗುತ್ತಿದ್ದರೆ ಕಾಂಗ್ರೆಸ್ (Congress) ಸುಧಾಕರ್ ಅವರನ್ನು ಸೋಲಿಸಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಹುಡುಕಾಟ ನಡೆಸುತ್ತಿದೆ.
ಹ್ಯಾಟ್ರಿಕ್ ಸಾಧನೆ:
ಹ್ಯಾಟ್ರಿಕ್ ಜಯದ ನಗೆ ಬೀರಿ ನಾಲ್ಕನೇ ಬಾರಿ ಕಣಕ್ಕೆ ಧುಮುಕಲು ಈಗಾಗಲೇ ಡಾ.ಕೆ.ಸುಧಾಕರ್ ಭರ್ಜರಿ ತಯಾರಿ ನಡೆಸಿದ್ದಾರೆ. ಅಬ್ಬರದ ಬಿಜೆಪಿ(BJP) ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದಾರೆ. ಇನ್ನೊಂದೆಡೆ ಚುನಾವಣೆ ಬರುವಷ್ಟರಲ್ಲಿ ಸಾಲು ಸಾಲು ಉದ್ಘಾಟನಾ ಸಮಾರಂಭಗಳು ಸೇರಿದಂತೆ ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜು ಉದ್ಗಾಟನೆ ಮಾಡಿದ್ದಾರೆ. ಈ ಹಿಂದೆಯೇ ಮನೆ ಮನೆಗೂ ಸ್ಟೌವ್, ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅರಿಶಿನ ಕುಂಕುಮದ ಹೆಸರಲ್ಲಿ ಸೀರೆ, ಪಂಚೆ, ಶಲ್ಯ, ಶರ್ಟ್ ಪೀಸ್ ಸೇರಿದಂತೆ ಸಾಕಷ್ಟು ಉಡುಗೊರೆಗಳು ಮತದಾರನ ಮನೆ ಬಾಗಿಲಿಗೆ ತಲುಪಿ ಆಗಿದೆ.
ಜೆಡಿಎಸ್ ಮನೆ ಮನೆ ಪ್ರಚಾರ
2013ರ ಚುನಾವಣೆಯಲ್ಲಿ ಸೋತ ನಂತರ ಮನೆ ಸೇರಿ ಕೃಷಿಕಾಯಕ ಮಾಡಿಕೊಳ್ಳುತ್ತಿದ್ದ ಮಾಜಿ ಶಾಸಕ ಬಚ್ಚೇಗೌಡರು, ಉಪಚುನಾವಣೆಯಲ್ಲಿ ಬೇರೆ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಸುಮ್ಮನಾಗಿದ್ದರು. ಆದರೆ ಈ ಬಾರಿ ಸುಧಾಕರ್ ಅಬ್ಬರದ ನಡುವೆ ಜೆಡಿಎಸ್ (JDS) ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರೇ (KP Bacccggowda) ನೇರವಾಗಿ ಕಣಕ್ಕಿಳಿದಿದ್ದು ಸೈಲೆಂಟಾಗಿ ಕ್ಷೇತ್ರದಾದ್ಯಂತ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಜಲಧಾರೆ, ಪಂಚರತ್ನ ಯಾತ್ರೆ ಮೂಲಕ ಅದ್ದೂರಿ ಪ್ರಚಾರಕ್ಕೆ ನಾಂದಿ ಹಾಡಿದ್ದರು. ಈಗ ಪ್ರತಿ ಗ್ರಾಮಕ್ಕೂ ಲಗ್ಗೆ ಇಡುತ್ತಿದ್ದು ಪ್ರತಿಯೊಬ್ಬ ಮತದಾರನ ನೇರವಾಗಿ ಭೇಟಿ ಮಾಡಿ ಮತ ಕೇಳುವ ಕಾಯಕ ಮಾಡುತ್ತಿದ್ದಾರೆ. ಮಂದಿರ, ಮಸೀದಿ, ಚರ್ಚ್ ಬಳಿಯೂ ಹೋಗಿ ಮತ ಕೇಳಲಾಗುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರು?
ಸುಧಾಕರ್, ಬಚ್ಚೇಗೌಡ ಚುನಾವಣಾ ತಯಾರಿ ಮಾಡುತ್ತಿದ್ದರೆ ಇತ್ತ ಕಾಂಗ್ರೆಸ್ (Congress) ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿ ಯಾರೆಂಬುದು ಇದುವರೆಗೂ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ಸುಧಾಕರ್ ಅವರನ್ನ ಸೋಲಿಸಲೇಬೇಕು ಅಂತ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ವೀರಾವೇಷದ ಮಾತುಗಳನ್ನಾಡಿ ಮುಳುಬಾಗಿಲಿನ ಕೊತ್ತೂರು ಮಂಜುನಾಥ್ ಕರೆತರಯವ ಪ್ರಯತ್ನ ಮಾಡಿದ್ರೂ ಫಲಪ್ರದವಾಗಿಲ್ಲ. ಬಲಿಜ ಸಮುದಾಯದ ಬ್ಯಾಕ್ ಅಪ್ ಪಡೆದು ರಕ್ಷಾ ರಾಮಯ್ಯ ಕಣಕ್ಕಿಳಿಸಲು ಪ್ರಯತ್ನಗಳು ನಡೆದವಾದರೂ ಆರಂಭದಲ್ಲೇ ಪಲ್ಟಿ ಹೊಡೆದವು . ಇದನ್ನೂ ಓದಿ: ರಾಕೇಶ್‌ನನ್ನು ಶಾಸಕನಾಗಿ ಕಾಣಲು ಬಯಸಿದ್ದ ಸಿದ್ದು – ಆದರೆ ವಿಧಿ ನಿಯಮವೇ ಬೇರೆ ಇತ್ತು!
ಕ್ಷೇತ್ರದಲ್ಲಿ ಆರ್ ಎಲ್ ಜಾಲಪ್ಪ ಸೋದರ ಅಳಿಯ ಜಿ ಎಚ್ ನಾಗರಾಜ್ ಪುತ್ರ ವಿನಯ್ ಶ್ಯಾಂ ಟಿಕೆಟ್ ಗಾಗಿ ಫೈಟ್ ಮಾಡುತ್ತಿದ್ದರೆ ಇತ್ತ ಹಿರಿಯ ಕಾಂಗ್ರೆಸ್ ಮುಖಂಡ ಯಲವಳ್ಳಿ ರಮೇಶ್, ಗಂಗರೆಕಾಲುವೆ ನಾರಾಯಣಸ್ವಾಮಿ ನಾವು ಆಕಾಂಕ್ಷಿತರು ಟಿಕೆಟ್‌ಗಾಗಿ ಒತ್ತಡ ಹಾಕಿದ್ದಾರೆ. ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೋ ಏನೋ ತಿಳಿಯದಾಗಿದೆ. ಆಕಾಂಕ್ಷಿತರು ಯಾರು ಸುಧಾಕರ್ ಎದುರು ಸಾಲಲ್ಲ ಅಂತ ಸ್ಥಳೀಯರನ್ನ ಬಿಟ್ಟು ಬೇರೆಯುವರನ್ನ ಕರೆ ತರುವ ಪ್ರಯುತ್ನಗಳು ಮುಂದುವರೆಯುತ್ತಿಲ್ಲ. ಯಾರು ಸಿಗಲಿಲ್ಲ ಅಂತ ಕೊನೆಗೆ ಸ್ಥಳೀಯರಿಗೆ ಮಣೆ ಹಾಕುತ್ತಾ ಕಾದು ನೋಡಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಈಗ ಬಲಿಜ ಸಮುದಾಯದ ಮುಖಂಡ ಪರಿಶ್ರಮ ನೀಟ್ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಈಶ್ವರ್ ಹೆಸರು ಸಹ ಕೇಳಿಬರುತ್ತಿದೆ.
ಜಾತಿ ಲೆಕ್ಕಾಚಾರ ಏನು?
ಒಕ್ಕಲಿಗ-ಬಲಿಜಿಗ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯದವರೇ ಕಣದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದರ ಮೇಲೆಯೂ ಚುನಾವಣಾ ಕಣ ರಂಗೇರಲಿದೆ. ಕಾಂಗ್ರೆಸ್‌ನಲ್ಲೂ ಒಕ್ಕಲಿಗ ಸಮುದಾಯದ ಆಕಾಂಕ್ಷಿಗಳೂ ಇದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್‌ನ ಲೆಕ್ಕಾಚಾರ ಏನಿದೆ? ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಜೆಪಿಗೆ ಸೇರಿ ಕಮಲ ಅರಳಿಸಿದ್ದು ಇದೇ ಡಾ.ಕೆ.ಸುಧಾಕರ್ ಈಗ ಬಿಜೆಪಿ ಪಾಳಯದಲ್ಲಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಈ ಬಾರಿ ಮತ್ತೆ ಕೈವಶ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಹೀಗಾಗಿ ಭಾರೀ ಲೆಕ್ಕಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಶತಾಯಗತಾಯ ಸುಧಾಕರ್ ಅವರನ್ನು ಸೋಲಿಸುವ ಲೆಕ್ಕಾಚಾರದಲ್ಲಿ ಯಾರನ್ನು ಅಭ್ಯರ್ಥಿಯಾಗಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಯಾವ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
2013 ಡಾ ಕೆ.ಸುಧಾಕರ್ (ಕಾಂಗ್ರೆಸ್) 74,914,
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ 59,866
ಗೆಲುವಿನ ಅಂತರ 15,048
2018ರ ಚುನಾವಣೆ
ಡಾ ಕೆ.ಸುಧಾಕರ್ (ಕಾಂಗ್ರೆಸ್) 82,006
ಕೆ.ಪಿ.ಬಚ್ಚೇಗೌಡ 51,575
ಗೆಲುವಿನ ಅಂತರ 30,431
2019ರ ಉಪ ಚುನಾವಣೆ
ಡಾ ಕೆ.ಸುಧಾಕರ್ (ಬಿಜೆಪಿ) 84,389,
ಎಂ.ಆಂಜಿನಪ್ಪ (ಕಾಂಗ್ರೆಸ್) 49,588
ಗೆಲುವಿನ ಅಂತರ 34,801
ಚಿಕ್ಕಬಳ್ಳಾಪುರ ಕ್ಷೇತ್ರ ಮತದಾರರ ವಿವರ
ಪುರುಷ ಮತದಾರರು – 1,00,956
ಮಹಿಳಾ ಮತದಾರರು – 1,03,322
ಒಟ್ಟು ಮತದಾರರು – 20,4278