ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯಾಧ್ಯಕ್ಷ ಜನಾರ್ದನ ರೆಡ್ಡಿ (Gali Janardhana Reddy) ಸೋಮವಾರ ಪಕ್ಷದ ಚಿಹ್ನೆ ಅನಾವರಣಗೊಳಿಸಿದ್ದಾರೆ. ಹೊಸ ಪಕ್ಷ ಸ್ಥಾಪನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿದಿರುವ ರೆಡ್ಡಿ ಪಕ್ಷಕ್ಕೆ ಫುಟ್ಬಾಲ್ ಚಿಹ್ನೆಯನ್ನ (Football Symbol) ಆಯ್ಕೆಮಾಡಿಕೊಂಡಿದ್ದಾರೆ. ಅಲ್ಲದೇ ಅವರು ಫುಟ್ಬಾಲ್ ಚಿಹ್ನೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನೆಂಬುದನ್ನೂ ವಿವರಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನ ಎಲ್ಲರು, ಎಲ್ಲಾ ಪಕ್ಷದವರೂ ಫುಟ್ಬಾಲ್ ತರ ಆಡಿದ್ರು. ಶತ್ರುಗಳು, ಸ್ನೇಹಿತರು ಎಲ್ಲಾರು ನನ್ನನ್ನ ಫುಟ್ಬಾಲ್ ಮಾಡಿದ್ರು. ನಾನು ಸಹ ಎಲ್ಲರ ಜೊತೆಯಲ್ಲಿ ಫುಟ್ಬಾಲ್ ಆಡಿದೆ. ಅದಕ್ಕಾಗಿಯೇ ನಾನು ಫುಟ್ಬಾಲ್ ಚಿಹ್ನೆ ಕೇಳಿದೆ. ಚುನಾವಣಾ ಆಯೋಗ ಅದನ್ನೇ ಕೊಟ್ಟಿದ್ದು, ಚುನಾವಣೆಯಲ್ಲೂ ಫುಟ್ಬಾಲ್ ಚಿಹ್ನೆಯನ್ನೇ ಆಯ್ಕೆಮಾಡಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.
ಯಾರಿಗೆ ಎಷ್ಟು ಗೋಲ್ ಸಿಕ್ಕಿತು? ಯಾರು ಎಷ್ಟು ಗೋಲ್ ಹೊಡೆದ್ರು ನಿಮಗೆ ಗೊತ್ತು. ಸಾಕಷ್ಟು ವರ್ಷಗಳಿಂದ ನೋಡ್ತಾ ಇದ್ದೀರಿ ನಿಮಗೆ ಎಲ್ಲಾ ಗೊತ್ತಿದೆ ನೀವೆ ಬರೆದುಕೊಳ್ಳಿ, ನಾನು ಯಾವ ಪಕ್ಷದ ಜೊತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ – ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ
ಇದೇ ವೇಳೆ ಪಕ್ಷದ ಪ್ರಣಾಳಿಕೆ ಮತ್ತು ಚಿಹ್ನೆ ಬಿಡುಗಡೆ ಮಾಡಿದ ರೆಡ್ಡಿ, ಗಂಗಾವತಿಗೆ ಜನಾರ್ದನ ರೆಡ್ಡಿ, ಬಳ್ಳಾರಿ ನಗರಕ್ಕೆ ಅರುಣಾ ಹಾಗೂ ನಾಗಾಠಾಣಾ ಕ್ಷೇತ್ರಕ್ಕೆ ಶ್ರೀಕಾಂತ್ ಬಿಡಗೇರ್ ಸೇರಿ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ.
ಡಿಸೆಂಬರ್ 25 ಪಕ್ಷ ಪ್ರಾರಂಭ ಮಾಡಿದೆ, ಅವತ್ತಿನಿಂದಲೇ ಪ್ರಚಾರ ಮಾಡಿದೆ. ಗಂಗಾವತಿ, ಕಲ್ಯಾಣ ಕರ್ನಾಟಕ ಎಲ್ಲಾ ಕಡೆ ಪ್ರಚಾರ ಮಾಡಿದ್ದೀನಿ. ನಾನು ಕನಸಿನಲ್ಲಿ ಕೂಡ ನೆನಸಿರಲಿಲ್ಲ, ಊಹಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಬೆಂಬಲ ಸಿಕ್ಕಿದೆ. 90 ದಿನಗಳಲ್ಲಿ 12 ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದೀನಿ. ಇನ್ನೊಂದು ವಾರದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೀನಿ. 19 ವಿಧಾನಸಭಾ ಕ್ಷೇತ್ರದಲ್ಲಿ ಪಟ್ಟಿ ಬಿಡುಗಡೆ ಮಾಡ್ತೀನಿ. 30 ಕ್ಷೇತ್ರದಲ್ಲಿ 100ಕ್ಕೆ 100 ಗೆಲ್ತೀನಿ ಎಂದು ಶಪಥ ಮಾಡಿದ್ದಾರೆ.
ಹೆಣ್ಮಕ್ಕಳ ಹೆಸರಲ್ಲಿ 2 ಬೆಡ್‌ರೂಮ್ ಮನೆ:
15 ವರ್ಷಗಳ ಹಿಂದೆ ಇದ್ದ ವಾತವಾರಣವೇ ಈಗಲೂ ಇದೆ. ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಆಗಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ (Unemployed) ಯುವಕರಿಗೆ ಮಾಸಿಕ 2,500 ನಿರುದ್ಯೋಗ ಭತ್ಯೆ, ಹೆಣ್ಣು ಮಕ್ಕಳ ಹೆಸರಲ್ಲಿ 2 BHK ನಿವಾಸ, ಸ್ವಂತ ನಿವೇಶನ ಹೊಂದಿದವರಿಗೆ 3 ಲಕ್ಷ ಹಣಕಾಸಿನ ನೆರವು ನೀಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಅದಾನಿ ಕಂಪನಿ ವಿರುದ್ಧ JPC ತನಿಖೆಗೆ ಆಗ್ರಹ – ಸಂಸತ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ವೇತನ ಹೆಚ್ಚಳ, ಗೃಹಿಣಿಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, ಒಂಟಿಯಾಗಿ ಬದುಕುವ ಮಹಿಳೆಯರಿಗೆ 2,500 ರೂ. ಹಾಗೂ ಶೂನ್ಯ ಬಡ್ಡಿದರದಲ್ಲಿ 10 ಲಕ್ಷ ಸಾಲ ಸೌಲಭ್ಯ, ಪ್ರತಿ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ, ಎಸ್ಸಿ-ಎಸ್ಟಿಗೆ ನಿವೇಷನ ಉಚಿತ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಬಿಜೆಪಿ ಅವರು ನನ್ನನ್ನ ಟಾರ್ಗೆಟ್ ಮಾಡಿದ್ದಾರೆ, ಆದರೂ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಕೆಲಸವನ್ನ ಮಾಡ್ತಾಇದ್ದೀನಿ. ನಾನು 7 ಅಥವಾ 8 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುತ್ತಾ ಇದ್ದೀನಿ. ನನ್ನ ಬಳಿ ಯಾರಿಗೂ ಬ್ಯಾಕ್ ಸ್ಟೇಜ್ ಅಲ್ಲಿ ಮಾತುಕತೆ ನಡೆಸಿಲ್ಲ. ಗೆದ್ದೆ ಗೆಲ್ಲುತ್ತೇನೆ ಅನ್ನುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕುತ್ತಾ ಇದ್ದೀನಿ ಎಂದು ವಿವರಿಸಿದ್ದಾರೆ.