ಮಾಜಿ ಸಚಿವ ಸಿಪಿವೈಗೆ ಕಾಂಗ್ರೆಸ್ ಟಿಕೆಟ್?- ಚನ್ನಪಟ್ಟಣ ಪೆಂಡಿಂಗ್ ಇಟ್ಟು ಡಿಕೆಶಿ ತಂತ್ರ

Public TV
2 Min Read
CP YOGESHWAR DK SHIVAKUMAR

ರಾಮನಗರ: ಕೊನೆಗೂ ಅಳೆದು ತೂಗಿ ಇಂದು ಕಾಂಗ್ರೆಸ್ (Congress) ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪೈಕಿ ಮೂರು ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಮಾಡಲಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಫೈನಲ್ ಆಗದ ಕಾರಣ ಮಾಜಿ ಸಚಿವ ಸಿಪಿ ಯೋಗೇಶ್ವರ್‌ (CP Yogeshwar) ಗೆ ಕೈ ನಾಯಕರು ಗಾಳ ಹಾಕಿದ್ದು, ಕೊನೆ ಕ್ಷಣದಲ್ಲಿ ಸಿಪಿವೈ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

CongressFlags1 e1613454851608

ಚನ್ನಪಟ್ಟಣ ಕ್ಷೇತ್ರ (Channapatna Constituency) ದ ಸಂಭಾವ್ಯ ಅಭ್ಯರ್ಥಿ ಆಗಿರೋ ಪ್ರಸನ್ನ ಗೌಡ ಕ್ಷೇತ್ರದಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಷ್ಟಾದರೂ ಪ್ರಸನ್ನಗೌಡಗೆ ಟಿಕೆಟ್ ಫೈನಲ್ ಮಾಡದೇ ಕಾದುನೋಡುವ ತಂತ್ರ ಅನುಸರಿಸಿದ್ದಾರೆ. ಸಿಪಿವೈಗೆ ಕೈ ನಾಯಕರು ಗಾಳ ಹಾಕುವ ಮೂಲಕ ಕಾಂಗ್ರೆಸ್ ಟಿಕೆಟ್ ನೀಡಿದರೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನ ಕಟ್ಟಿಹಾಕಬಹುದು ಎಂಬ ಹೊಸ ತಂತ್ರಗಾರಿಕೆ ಮಾಡಿದ್ದಾರೆ. ಮತ್ತೊಂದು ಕಡೆ ನಟಿ ರಮ್ಯಾ ಅವರನ್ನು ಕಣಕ್ಕಿಳಿಸುವ ಚರ್ಚೆ ಕೂಡ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದ್ದು, ನಟಿ ಕೂಡಾ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ರೆ ಮಹಿಳಾ ಅಭ್ಯರ್ಥಿ ಮೂಲಕ ಕ್ಷೇತ್ರದಲ್ಲಿ ಮತದಾರರ ಓಲೈಕೆ ಮಾಡಿ ಜೆಡಿಎಸ್‍ಗೆ ಟಕ್ಕರ್ ಕೊಡ್ತಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್‌ – 124 ಕ್ಷೇತ್ರಗಳಿಗೆ ಅಭ್ಯರ್ಥಿ

HDKumaraswamy 1

ಅಂದಹಾಗೆ ಸಿಪಿ ಯೋಗೇಶ್ವರ್ ಕಳೆದ ಎರಡು ತಿಂಗಳಿಂದ ಚನ್ನಪಟ್ಟಣ ಪ್ರತಿ ಮನೆ ಮನೆಗೂ ಭೇಟಿ ನೀಡುವ ಮೂಲಕ ಸ್ವಾಭಿಮಾನಿ ನಡೆ ಕಾರ್ಯಕ್ರಮದ ಮೂಲಕ ಜನರಿಗೆ ಮತ್ತಷ್ಟು ಹತ್ತಿರ ಆಗಲು ಹೊರಟಿದ್ದಾರೆ. ಇದರ ನಡುವೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ತಾರೆ ಎಂದು ಕಳೆದ ಹಲವು ತಿಂಗಳಿಂದ ಊಹಾಪೋಹಗಳು ನಡೆಯುತ್ತಲೇ ಇದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಹ ಕೇಳಿ ಬಂದಿದೆ. ಇದಕ್ಕೆ ಪೂರಕವೆಂಬಂತೆ ಇಂದು ಎಐಸಿಸಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಕಗ್ಗಂಟಾಗಿ ಉಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

RAMYA 6

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಸಿಪಿ ಯೋಗೇಶ್ವರ್ ಕಣಕ್ಕಿಳಿಸಿದರೆ ಕುಮಾರಸ್ವಾಮಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಪ್ಲಾನ್ ಮಾಡಿದೆ. ತವರು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ (DK Shivakumar), ಹೊಸ ತಂತ್ರಗಾರಿಕೆ ಹೆಣೆದಿದ್ದಾರೆ. ಯೋಗೆಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸಕ್ಕೆ ಕೈ ನಾಯಕರು ಮುಂದಾಗಿದ್ದು, ಕೊನೆ ಕ್ಷಣದವರೆಗೂ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ.

ಒಟ್ಟಿನಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತಷ್ಟು ಗೊಂದಲ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದು, ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಸಿಪಿವೈ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳು

Share This Article
Leave a Comment

Leave a Reply

Your email address will not be published. Required fields are marked *