ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

Public TV
2 Min Read
MANGALURU COOKER BLAST 3

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Blast) ಗೊಂಡು ಅಮಾಯಕ ಆಟೋ ಚಾಲಕ (Auto Driver) ಅರೆಬರೆ ಸುಟ್ಟು ಹೋಗಿದ್ದು ಭಾರೀ ಸುದ್ದಿಯಾಗಿತ್ತು. ತನ್ನ ಮಗಳ ಮದುವೆ ಹಿನ್ನೆಲೆಯಲ್ಲಿ ಬಡಪಾಯಿ ಆಟೋ ಚಾಲಕ ರಾತ್ರಿ- ಹಗಲೆನ್ನದೆ ದುಡಿಯುತ್ತಿದ್ದಾಗಲೇ ದುರಂತ ಎದುರಾಗಿತ್ತು. ಬಾಂಬ್ ಸ್ಫೋಟದಿಂದಾಗಿ ದಿಕ್ಕೆಟ್ಟು ಹೋಗಿದ್ದ ಆಟೋ ಚಾಲಕನ ಬಾಳಿಗೆ ಈಗ ಗುರುಬೆಳದಿಂಗಳು ಫೌಂಡೇಶನ್ ಆಸರೆಯಾಗಿದೆ.

MANGALURU COOKER BLAST 6

ಅಂದು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸುಟ್ಟು ಹೋಗಿದ್ದ ಪುರುಷೋತ್ತಮ ಪೂಜಾರಿಗೆ ಬದುಕುವ ಭರವಸೆಯೇ ಇರಲಿಲ್ಲ. ಸಚಿವರು, ಶಾಸಕರು ಪರಿಹಾರದ ಭರವಸೆ ಇತ್ತರೂ, ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್. ಒಂದೆಡೆ ಮಗಳ ಮದುವೆಯ ಚಿಂತೆ, ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಮನೆಯ ಕುರಿತು ಚಿಂತಿಸಿಯೇ ಪುರುಷೋತ್ತಮ ಪೂಜಾರಿ ಕುಸಿದು ಹೋಗಿದ್ದರು. ಆದರೆ ನಾಲ್ಕೇ ತಿಂಗಳಲ್ಲಿ ಈ ಫೌಂಡೇಶನ್ ಆರು ಲಕ್ಷ ವೆಚ್ಚದಲ್ಲಿ ಮನೆಯನ್ನು ನವೀಕರಣಗೊಳಿಸಿದ್ದಾರೆ. ಯುಗಾದಿಯ ಶುಭ ದಿನದಂದೇ ಪುರುಷೋತ್ತಮ ಪೂಜಾರಿಗೆ ಹೊಸ ಮನೆಯನ್ನು ಹಸ್ತಾಂತರಿಸಿದ್ದಾರೆ.

MANGALURU COOKER BLAST

ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಚರ್ಚ್ ಧರ್ಮಗುರು ನೇತೃತ್ವದಲ್ಲಿ ಮನೆಯನ್ನು ಗುರು ಬೆಳದಿಂಗಳು ಹೆಸರಲ್ಲಿಯೇ ಅನಾವರಣ ಮಾಡಲಾಗಿದೆ. ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರಗೊಂಡರೂ, ಸರ್ಕಾರದಿಂದ ಚಿಕ್ಕಾಸಿನ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಇದೆ. ಚಿಕಿತ್ಸಾ ವೆಚ್ಚ ಎಂಟು ಲಕ್ಷ ಆಗಿದ್ದು, ಅದನ್ನು ಮಗಳ ಇಎಸ್‍ಐ ಸೌಲಭ್ಯದಿಂದ ಭರಿಸಲಾಗಿದೆ. ಬಾಂಬ್ ಸ್ಫೋಟ ಸಂದರ್ಭದಲ್ಲಿ ಸರ್ಕಾರದ ಪರಿಹಾರದ ಭರವಸೆ ನೀಡಿದ್ದರೂ, ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಪುರುಷೋತ್ತಮ ಪೂಜಾರಿ ಅಳಲು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

MANGALURU COOKER BLAST 1

ಈಗಲೋ ಆಗಲೋ ಬಿದ್ದು ಹೋಗುವ ಭಯದಲ್ಲಿದ್ದ ಮನೆಯನ್ನು ನವೀಕರಣಗೊಳಿಸಲು ಮುಂದಾಗಿದ್ದು, ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿರುವ ಪದ್ಮರಾಜ್ ಕಾರ್ಯ ಸರ್ವತ್ರ ಪ್ರಶಂಸೆಗೆ ಒಳಗಾಗಿದೆ. ಮೂರು ವರ್ಷದ ಹಿಂದೆ ಯುಗಾದಿಯಂದೇ ಸ್ಥಾಪನೆಯಾದ ಈ ಫೌಂಡೇಶನ್ ಇಂದು ಯುಗಾದಿಯಂದೇ ಮನೆ ಹಸ್ತಾಂತರಿಸಿದೆ. ಇದೇ ವೇಳೆ ಐದು ತಿಂಗಳು ಕಳೆದರೂ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಸಿಗದೇ ಇರುವುದನ್ನು ಪದ್ಮರಾಜ್ ಖಂಡಿಸಿದ್ದಾರೆ.

MANGALURU COOKER BLAST 5

ಒಟ್ಟಿನಲ್ಲಿ ಒಂದೆಡೆ ಯುಗಾದಿ (Ugadi 2023) ಶುಭದಿನದಂದೇ ಮನೆಯನ್ನು ನವೀಕರಣಗೊಳಿಸಿ ಹಸ್ತಾಂತರ ಮಾಡಿದರೆ, ಸಂತ್ರಸ್ತನಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಎದ್ದಿರುವುದು ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ಕಿವಿ ಹಿಂಡಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *