ಚಿಕ್ಕಬಳ್ಳಾಪುರ: ನನಗೆ ಉರಿಗೌಡ, ನಂಜೇಗೌಡ ಗೊತ್ತಿಲ್ಲ. ನಮಗೆ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಮಾತ್ರ ಗೊತ್ತು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Sudhakar) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಉರಿಗೌಡ-ನಂಜೇಗೌಡರ (Urigowda Nanjegowda) ಬಗ್ಗೆ ನಾನು ಓದಿಲ್ಲ. ನನಗೆ ಗೊತ್ತಿರುವವರ ಬಗ್ಗೆ ಕೇಳಿದ್ರೆ ಹೇಳುತ್ತೇನೆ, ಗೊತ್ತಿಲ್ಲದವರ ಬಗ್ಗೆ ಯಾವುದನ್ನು ಹೇಳಲಾಗುವುದಿಲ್ಲ. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ. ಚರಿತ್ರೆಯಲ್ಲಿ ದೇಶ ಸೇವೆ ಮಾಡಿದವರಿಗೆ ಮಾನ್ಯತೆ ಕೊಡೋಣ, ಗೌರವ ಸೂಚಿಸೋಣ. ಗೊತ್ತಿಲ್ಲದವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.
ಬಿಜೆಪಿಯವರು (BJP) ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿದ್ದಾರೆ ಎಂಬ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ ಕುಮಾರಸ್ವಾಮಿಯವರು ಜಾತಿ ರಾಜಕಾರಣ ಮಾಡಲ್ವಾ? ಅವರ ಜಾತಿ ಬಗ್ಗೆ ಹೇಳಿಕೊಳ್ಳುವುದಿಲ್ವಾ? ರಾಜಕಾರಣದಲ್ಲಿ ಮಾಡೋದೆ ಜಾತಿ ರಾಜಕಾರಣ, ನಾವ್ ಹೇಳೊದೊಂದು ಮಾಡೊದೊಂದು. ಜಾತಿ ರಾಜಕಾರಣ ಮಾಡಲ್ಲ ಅಂತ, ಎದೆ ಮುಟ್ಟಿಕೊಂಡು ಯಾರಾದರೂ ಹೇಳಲಿ? ಸತ್ಯ ಮಾತಾಡಬೇಕು ಎಂದು ಹೆಚ್‍ಡಿಕೆ (HD Kumaraswamy) ವಿರುದ್ಧ ಕಿಡಿಕಾರಿದರು.
ಒಕ್ಕಲಿಗ ಸಮಾವೇಶದಲ್ಲಿ ನಾನು ನಿಮ್ಮ ಮಗ ಮತ ಕೊಡಿ ಅಂತ ಡಿಕೆಶಿ ಕೇಳ್ತಾರೆ. ದಲಿತ ನಾಯಕರು ದಲಿತ ಸಮುದಾಯದ ಮನವಿ ಮಾಡಿಕೊಳ್ಳುತ್ತಾರೆ. ಜಾತಿ ಮೀರಿ ರಾಜಕಾರಣಿಗಳು ಬೆಳೆಯಬೇಕು, ವಿಚಾರಧಾರೆಗಳು ಬದಲಾಗಬೇಕು. ಹೀಗಾಗಿಯೇ ಮೋದಿಯವರು ಭಿನ್ನವಾಗಿ ಕಾಣುತ್ತಾರೆ. ಅವರ ತತ್ವಸಿದ್ಧಾಂತ ಆಶಯಗಳು ಬೇರೆ. ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ
ಕೋಲಾರ (Kolar) ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಿಂದೆ ಸರಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ವರುಣಾಗೆ ಹೊಗ್ತಾರೆ ಅಂತ ನಾನು ಮೊದಲೇ ಹೇಳಿದ್ದೆ. ಕೋಲಾರಕ್ಕೆ ಬೇಡವೆಂದು ರಾಹುಲ್ ಗಾಂಧಿ ಹೇಳಿರಲಿಲ್ಲ. ಕೋಲಾರದಿಂದ ಏನೋ ಮಾಹಿತಿ ಬಂದಿರುತ್ತದೆ. ಸಿದ್ದರಾಮಯ್ಯ ವರುಣಾಗೆ ಹೊದ್ರೆ ಅವರಿಗೆ ಒಳ್ಳೆಯದು ಆಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಬರುವುದೇ ಗ್ಯಾರಂಟಿಯಿಲ್ಲ, ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ?-ಆರ್.ಅಶೋಕ್