ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

Public TV
2 Min Read
HSN BALAKRISHNA

ಬೆಂಗಳೂರು: ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ (Urigowda-Nanjegowda) ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ (C.N.Balakrishna) ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹುನ್ನಾರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

Urigowda Nanjegowda 1

ಈ ರೀತಿಯ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಹತ್ತಿರದಲ್ಲಿರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಸರ್ಕಾರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

Urigowda Nanjegowda

ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ಶ್ರೀ ನಂಜಾವಧೂತ ಸ್ವಾಮೀಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿನ ಬಡ ಒಕ್ಕಲಿಗರಿಗೆ ಇಡಬ್ಲ್ಯೂಎಸ್‌ ಪ್ರಮಾಣ ಪತ್ರ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಸಿ.ಎನ್.ಬಾಲಕೃಷ್ಣ ಅವರು, ಇದೇ ವೇಳೆಯಲ್ಲಿ ಒಕ್ಕಲಿಗರಿಗೆ ಅವರ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ರಾಜ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡ ಹೆಸರು ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಈ ಇಬ್ಬರೂ ಟಿಪ್ಪುವನ್ನು ಹತ್ಯೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಬಿಂಬಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಗಿಮಿಕ್‌. ವೋಟ್‌ ಬ್ಯಾಂಕ್‌ಗಾಗಿ ಉರಿಗೌಡ-ನಂಜೇಗೌಡ ಹೆಸರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *