ಮುಂಬೈ: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ಮುಂಬೈ ಇಂಡಿಯನ್ಸ್‌ಗೆ (Mumbai Indians) ಅಂತೂ ಯುಪಿ ವಾರಿಯರ್ಸ್ ತಂಡ ಸೋಲಿನ ರುಚಿ ತೋರಿಸಿದೆ. ಸೋಫಿ ಎಕ್ಲಿಸ್ಟೋನ್ ಮಿಂಚಿನ ಬೌಲಿಂಗ್ ಹಾಗೂ ಮೆಕ್‌ಗ್ರಾತ್, ಹ್ಯಾರಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ (UP Warriorz) 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಶನಿವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರೀತ್ ಕೌರ್ ಪಡೆ ನಿಗದಿತ ಓವರ್‌ಗಳಲ್ಲಿ 127 ರನ್ ಗಳಿಗೆ ಸರ್ವಪತನ ಕಂಡಿತು. 128 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ರಾಮ್ ಚರಣ್‌ಗೆ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ
ಚೇಸಿಂಗ್ ಆರಂಭಿಸಿದ ನಾಯಕಿ ಅಲಿಸ್ಸಾ ಹೀಲಿ (Alyssa Healy) ಹಾಗೂ ದೇವಿಕಾ ವೈದ್ಯ ಬೇಗನೆ ಔಟಾಗಿ ತಂಡಕ್ಕೆ ಆಘಾತ ನೀಡಿದರು. ದೇವಿಕಾ 1 ರನ್, ಹೀಲಿ 8 ರನ್ ಗಳಿಸಿದರೆ, ಈ ಬೆನ್ನಲ್ಲೇ ಕಿರಣ್ ನವಗಿರೆ 12 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ತಾಲಿಯಾ ಮೆಕ್‌ಗ್ರಾತ್ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು.
ಮೆಕ್‌ಗ್ರಾತ್ 25 ಎಸೆತಗಳಲ್ಲಿ 38 ರನ್ (6 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಹ್ಯಾರಿಸ್ 28 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 39 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ 13 ರನ್, ಸೋಫಿ ಎಕ್ಲಿಸ್ಟೋನ್ ಅಜೇಯ 16 ರನ್ ಗಳಿಸಿ ಜಯ ದಾಖಲಿಸಿದರು.
ಮುಂಬೈ ಪರ ಅಮೇಲಿ ಕೇರ್ 2 ವಿಕೆಟ್ ಪಡೆದರೆ, ನಾಟ್ ಸ್ಕಿವರ್ ಬ್ರಂಟ್, ಹೇಲಿ ಮ್ಯಾಥಿವ್ಸ್, ಇಸ್ಸಿವಾಂಗ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್ ಜಾಕ್ಸ್ ಬದಲಿಗೆ ಕಿವೀಸ್ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಹೇಲಿ ಮ್ಯಾಥಿವ್ಸ್ (Hayley Matthews) 30 ಎಸೆತಗಳಲ್ಲಿ 35 ರನ್ (1 ಬೌಂಡರಿ, 3 ಸಿಕ್ಸರ್), ಇಸ್ಸಿ ವಾಂಗ್ 19 ಎಸೆತಗಳಲ್ಲಿ ಸ್ಫೋಟಕ 32 ರನ್ (4 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) 22 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 25 ರನ್ ಗಳಿಸಿದರೆ, ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದರು. ಅಂತಿಮವಾಗಿ ಮುಂಬೈ 127 ರನ್ ಗಳಿಗೆ ಓವರ್ ಸಮಾಪ್ತಿಯೊಂದಿಗೆ ಆಲೌಟ್ ಆಯಿತು.
ಯುಪಿ ವಾರಿಯರ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಸೋಫಿ ಎಕ್ಲಿಸ್ಟೋನ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಕಿತ್ತರು. ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರೆ, ಅಂಜಲಿ ಸರ್ವಾನಿ 1 ವಿಕೆಟ್ ಪಡೆದು ಮಿಂಚಿದರು.