ಬಹುಕೋಟಿ ವಂಚನೆ ಆರೋಪದಲ್ಲಿ ಜೈಲು ಪಾಲಾಗಿರುವ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಮತ್ತು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಲವ್‌ಸ್ಟೋರಿ (Love Story) ಕುರಿತು ಸಿನಿಮಾ (Cinema) ಮಾಡುವುದಾಗಿ ಹಿಂದಿ ನಿರ್ದೇಶಕ ಆನಂದ್ ಎನ್ನುವವರು ಘೋಷಿಸಿದ್ದಾರೆ. ಈ ಸಂಬಂಧ ಅವರು ಜೈಲಿನಲ್ಲಿರುವ ಸುಕೇಶ್ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ.
ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ವಿಚಾರ ಹಲವು ತಿಂಗಳಿಂದ ನಡೆಯುತ್ತಿದ್ದರೂ, ಅದು ಬೆಳಕಿಗೆ ಬಂದಿದ್ದು ಸುಕೇಶ್ ಬಂಧನವಾದ ನಂತರ. ವಂಚನೆಯ ಹಣವನ್ನು ಈತ ಯಾರಿಗೆಲ್ಲ ಖರ್ಚು ಮಾಡಿದ್ದಾನೆ ಎಂದು ತನಿಖೆಗೆ ಇಳಿದಾಗ ಅದರಲ್ಲಿ ಜಾಕ್ವೆಲಿನ್ ಹೆಸರು ಪತ್ತೆಯಾಗಿತ್ತು. ಹಲವು ದುಬಾರಿ ವಸ್ತುಗಳನ್ನು ಈಕೆಗೆ ಸುಕೇಶ್ ನೀಡಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು
ತಾನು ಸುಕೇಶ್‌ನನ್ನು ಭೇಟಿಯಾಗಿದ್ದು ಕಡಿಮೆ. ಆತ ನನಗೇನೂ ಕೊಡಿಸಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರೂ, ತಾನು ಆತನನ್ನು ಪ್ರೀತಿಸುತ್ತಿಲ್ಲ ಎಂದು ಪದೇ ಪದೇ ಹೇಳಿಕೆ ಕೊಡುತ್ತಿದ್ದರೂ, ಸುಕೇಶ್ ಮಾತ್ರ ಅದನ್ನು ಒಪ್ಪುತ್ತಿಲ್ಲ. ಈಗಲೂ ಜಾಕ್ವೆಲಿನ್‌ಳನ್ನು ಪ್ರೀತಿಸುತ್ತಿದ್ದೇನೆ ಎಂದು ಜೈಲಿನಿಂದಲೇ ಸಂದೇಶ ಕಳುಹಿಸುತ್ತಿದ್ದಾನೆ. ಅಲ್ಲದೇ ಪ್ರೇಮಿಗಳ ದಿನದಂದು ಅವನು ವಿಶ್ ಮಾಡಿದ್ದ.
ಸುಕೇಶ್ ಮತ್ತು ಜಾಕ್ವೆಲಿನ್ ಪ್ರೇಮ ಎಂಥದ್ದು, ಇಬ್ಬರೂ ಪ್ರೀತಿಸುತ್ತಿದ್ದರಾ? ಉಡುಗೊರೆ ವಿನಿಮಯದ ಕಥೆ ಏನು? ಹೀಗೆ ಹತ್ತು ಹಲವು ಸಂಗತಿಗಳನ್ನು ಇಟ್ಟುಕೊಂಡು ಆನಂದ್ ಎನ್ನುವವರು ಹಿಂದಿಯಲ್ಲಿ ಸಿನಿಮಾ ಮಾಡಲಿದ್ದಾರಂತೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.