ಬೆಂಗಳೂರು: ಕೆಎಸ್‌ಡಿಎಲ್ (KSDL) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪ್ರಕರಣದ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ವಿರುದ್ಧ ಕಾಂಗ್ರೆಸ್ (Congress Poster Campaign) ಕಾರ್ಯಕರ್ತರು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.
ಯಶವಂತಪುರ ಬಸ್ ನಿಲ್ದಾಣದ ಗೋಡೆಗಳಿಗೆ ʼಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಿದ್ದಾರೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ. ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ವಿರೂಪಾಕ್ಷಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ – ಅಂದು ಬಿಜೆಪಿ ಸರ್ಕಾರದಿಂದಲೇ ಪ್ರಶಾಂತ್ ಮಾಡಾಳ್‌ಗೆ ಕ್ಲೀನ್‌ಚಿಟ್?
ಎ1 ಆರೋಪಿ ಮಿಸ್ಸಿಂಗ್. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಲೋಕಾಯುಕ್ತ ತನಿಖೆಗೆ ಸಹಾಯ ಮಾಡಿ. ವಯಸ್ಸು, ಎತ್ತರ, ಸ್ಥಳ ಬಗ್ಗೆ ಪೋಸ್ಟರ್‌ನಲ್ಲಿ ನಮೂದಿಸಿ ವ್ಯಂಗ್ಯ ಮಾಡಿದೆ. ಮಾಡಾಳ್ ವಿರೂಪಾಕ್ಷಪ್ಪ ಮೈಸೂರು ಸ್ಯಾಂಡಲ್ ಸೋಪ್ ಹಗರಣಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್ ಮತ್ತು ಸಹಚರರನ್ನು ಬಂಧಿಸಲಾಗಿತ್ತು. ಪ್ರಶಾಂತ್‌ನನ್ನು ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಒಟ್ಟು 7.72 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್, ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ತಂದೆ ಮಾಡಾಳ್ ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ, ರಾಸಾಯನಿಕ ಸರಬರಾಜು ವೇಳಾಪಟ್ಟಿ ಮತ್ತು ಕಾರ್ಯಾದೇಶ ವಿತರಿಸಲು 81 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಶ್ರೇಯಸ್ ಕಶ್ಯಪ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಶಾಸಕ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಮಗನ ಬಂಧನದ ಸುದ್ದಿ ಹೊರಬಂದಾಗಿನಿಂದ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಇದರ ನಡುವೆ ಸಿಎಂ ಸೂಚನೆ ಮೇರೆಗೆ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ತನಗೆ ನಿರೀಕ್ಷಣಾ ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆ ಸಂಬಂಧ ತಕ್ಷಣ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು.