ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

Public TV
2 Min Read
Elon Musk

ವಾಷಿಂಗ್ಟನ್: ಕಳೆದ 2 ತಿಂಗಳ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿಗಳ (World’s Richest Person) ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಇಳಿದಿದ್ದ ಟೆಸ್ಲಾ (Tesla) ಹಾಗೂ ಟ್ವಿಟ್ಟರ್ (Twitter) ಸಿಇಒ ಎಲೋನ್ ಮಸ್ಕ್ (Elon Musk) ಇದೀಗ ಮತ್ತೆ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ರೆಂಚ್ ಐಷಾರಾಮಿ ಬ್ರ‍್ಯಾಂಡ್ ಲೂಯಿ ವಿಟಾನ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಪಡೆದಿದ್ದರು. ಇದೀಗ 2 ತಿಂಗಳು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮಸ್ಕ್ ಮತ್ತೆ ಮೊದಲನೇ ಸ್ಥಾನಕ್ಕೆ ಮರಳಿದ್ದಾರೆ.

Elon Musk 1

ವರದಿಗಳ ಪ್ರಕಾರ ಈ ವರ್ಷ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಶೇ.70 ರಷ್ಟು ಏರಿಕೆಯಾಗಿರುವುದೇ ಮಸ್ಕ್ ಮತ್ತೆ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಕಾರಣವಾಗಿದೆ. ಅಂದಾಜಿನ ಪ್ರಕಾರ ಸೋಮವಾರ ಷೇರು ಪೇಟೆ ಮುಕ್ತಾಯವಾದ ಬಳಿಕ ಮಸ್ಕ್ ಸಂಪತ್ತಿನ ಮೌಲ್ಯ 187.1 ಬಿಲಿಯನ್ ಡಾಲರ್ (ಸುಮಾರು 15.46 ಲಕ್ಷ ಕೋಟಿ ರೂ.) ಆಗಿದ್ದು, 185.3 ಬಿಲಿಯನ್ ಡಾಲರ್ (ಸುಮಾರು 15.29 ಲಕ್ಷ ಕೋಟಿ ರೂ.) ಸಂಪತ್ತಿನ ಮೌಲ್ಯ ಹೊಂದಿರುವ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

ಈಗ ಮೊದಲ ಸ್ಥಾನ ಏರಿದರೂ ಟೆಸ್ಲಾ ಮುಖ್ಯಸ್ಥನ ನಿವ್ವಳ ಸಂಪತ್ತಿನ ಮೌಲ್ಯ ಕಳೆದ ವರ್ಷ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 200 ಶತಕೋಟಿ ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಇತ್ತೀಚಿನ ಇತಿಹಾಸದಲ್ಲೇ ಅತಿ ದೊಡ್ಡ ಸಂಪತ್ತಿನ ನಷ್ಟಗಳಲ್ಲಿ ಒಂದಾಗಿದೆ.

Elon Musk twitter 2

ಇದೆಲ್ಲದರ ನಡುವೆ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅವರು ಕಂಪನಿಯಲ್ಲಿ ವೆಚ್ಚವನ್ನು ಕಡಿತಗೊಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. 44 ಬಿಲಿಯನ್ ಡಾಲರ್ ಖರ್ಚು ಮಾಡಿ ಟ್ವಿಟ್ಟರ್ ಅನ್ನು ಖರೀದಿಸಿದ ಮಸ್ಕ್ ಕಂಪನಿ ದಿನಕ್ಕೆ ಸುಮಾರು 4 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸುತ್ತಿದೆ ಎಂದು ನವೆಂಬರ್‌ನಲ್ಲಿ ತಿಳಿಸಿದ್ದರು. ಈ ಹಿನ್ನೆಲೆ ಅವರು ಕಂಪನಿಯ ಅರ್ಧಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದನ್ನೂ ಓದಿ: ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

Share This Article
Leave a Comment

Leave a Reply

Your email address will not be published. Required fields are marked *