ಐಪಿಎಸ್ ಮತ್ತು ಐಎಎಸ್ ಮಹಿಳಾ ಅಧಿಕಾರಿಗಳ ಕಿತ್ತಾಟಕ್ಕೆ ಸಂಬಂಧಿಸಿದಂತೆ ಇಬ್ಬರು ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬಂದಿದ್ದು, ಆ ಸಿನಿಮಾಗೆ ಟೈಟಲ್ ಕೊಡುವಂತೆ ಮೊನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ಕುರಿತಂತೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ನಿರ್ಮಾಪಕರು ಕೇಳಿರುವ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿ ನೀಡುತ್ತಾ ಎನ್ನುವ ಕುತೂಹಲ ಮೂಡಿದೆ.
ಜನರ ಮನಸ್ಸನ್ನು ಸೆಳೆದ ಘಟನೆಗಳನ್ನು ಆಧರಿಸಿ ಸಿನಿಮಾಗಳು ಬರುವುದು ಹೊಸದೇನೂ ಅಲ್ಲ. ಅದರಲ್ಲೂ ಕಾಂಟ್ರವರ್ಸಿ ಆಗಿರುವಂತಹ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ನಾಮುಂದು ತಾಮುಂದು ಎಂದು ಬಂದವರ ಸಂಖ್ಯೆ ಕಡಿಮೆಯೇನೂ ಇಲ್ಲ. ಇದೀಗ ಅದಕ್ಕೆ ಹೊಸ ಸೇರ್ಪಡೆ ಐಎಎಸ್, ಐಪಿಎಸ್ ಅಧಿಕಾರಿಗಳ ಜಗಳ. ನಾಲ್ಕೈದು ದಿನಗಳ ಕಾಲ ಸಾಕಷ್ಟು ಸುದ್ದಿಯಾಗಿದ್ದ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದೆ ಬಂದಿದ್ದಾರೆ.
ಇಬ್ಬರು ಮಹಿಳಾ ಅಧಿಕಾರಿಗಳು ನಾಲ್ಕೈದು ದಿನಗಳ ಕಾಲ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅದೇ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಸಿನಿಮಾದ ಟೈಟಲ್ ಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿಯನ್ನೂ ಹಾಕಿದ್ದಾರೆ. ಒಂದು ಸಿನಿಮಾದ ಟೈಟಲ್ ಅಧಿಕಾರಿಗಳ ಹೆಸರನ್ನು ಒಳಗೊಂಡಿದ್ದರೆ, ಮತ್ತೊಂದು ಸಿನಿಮಾದ ಟೈಟಲ್ ಆರ್ ವರ್ಸಸ್ ಆರ್ ಎಂದು ಇಟ್ಟಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ
ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದರ ಕುರಿತು ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ಖಚಿತ ಪಡಿಸಿದ್ದು ಟೈಟಲ್ ಕಮೀಟಿ ಮುಂದೆ ಇಟ್ಟು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ಸಿನಿಮಾವನ್ನು ಬಿಯಾಂಡ್ ಡ್ರೀಮ್ಸ್ ಸಂಸ್ಥೆ ನಿರ್ಮಿಸಲು ಮುಂದೆ ಬಂದಿದ್ದರೆ, ಮತ್ತೊಂದು ಚಿತ್ರದ ಟೈಟಲ್ ಗಾಗಿ ಪ್ರವೀಣ್ ಶೆಟ್ಟಿ ಎನ್ನುವ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳು ಟೈಟಲ್ ಕಮಿಟಿ ಮುಂದೆ ಇಂದು ಬಂದಿವೆ. ಟೈಟಲ್ ಕೊಡುತ್ತಾ ಅಥವಾ ತಿರಸ್ಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕು.