ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜನವರಿ 3 ರಂದು ವಿಜಯಪುರ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕನಿಷ್ಠ 10 ಲಕ್ಷ ಮಂದಿ ಶ್ರೀಗಳ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಜನವರಿ 3ರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ದರ್ಶನಕ್ಕೆ ಬರುವವರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗುತ್ತದೆ. ಇದನ್ನೂ ಓದಿ: ವಿಜಯಪುರ ಜ್ಞಾನಯೋಗಾಶ್ರಮ ಮಠದ ಸಿದ್ದೇಶ್ವರ ಸ್ವಾಮೀಜಿ ವಿಧಿವಶ
ಕಳೆದ ನಾಲ್ಕು ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿತ್ತು. ಆದರೆ ಮಧ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನ್‍ನಲ್ಲಿ ಸ್ವಾಮೀಜಿಗೆ ಉಸಿರಾಟ ತೊಂದರೆ ಜಾಸ್ತಿಯಾಗಿದೆ. ಸ್ವಾಮೀಜಿ ಬಿಪಿ ಸ್ವಲ್ಪ ಕಡಿಮೆಯಾಗಿದೆ. ಸ್ವಾಮೀಜಿ ಆಹಾರ ತೆಗೆದುಕೊಳ್ಳುತ್ತಿಲ್ಲ. ಆದರೂ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇವೆ. ಸ್ವಾಮೀಜಿ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ. ಏನು ಚಿಕಿತ್ಸೆ ಕೊಡುತ್ತಿರೋ ಇಲ್ಲೇ ಕೊಡಿ ಸ್ವಾಮೀಜಿ ಹೇಳಿದ್ದರು ಎಂದು ವೈದ್ಯರು ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ 6:05ಕ್ಕೆ ಲಿಂಗೈಕ್ಯರಾಗಿದ್ದಾರೆ.