ಭಾರತೀಯ ಸಿನಿಮಾ ರಂಗದಲ್ಲಿ ಮೇಲುಕೀಳಿನ ಸಮಸ್ಯೆ ಇಂದು ನೆನ್ನೆಯದಲ್ಲ. ಬಾಲಿವುಡ್ (Bollywood) ಚಿತ್ರೋದ್ಯಮವೇ ಭಾರತದ ಚಿತ್ರೋದ್ಯಮ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ ನಿಂತಿರುವ ಈ ಹೊತ್ತಿನಲ್ಲಿ ಬಾಲಿವುಡ್ ಅನ್ನು ದ್ವೇಷಿಸುವಂತಹ ಕೆಲಸವೂ ನಡೆದಿದೆ. ಹೀಗಾಗಿ ರಾಕಿಂಗ್ ಸ್ಟಾರ್ (Rocking Star) ಯಶ್, ಯಾವ ಸಿನಿಮಾ ರಂಗವನ್ನೂ ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಯಶ್ (Yash), ‘ನಾವು ಈ ಹಂತವನ್ನು ತಲುಪಲು ತುಂಬಾ ಶ್ರಮ ಪಟ್ಟಿದ್ದೇವೆ. ಅವಮಾನಗಳನ್ನು ಎದುರಿಸಿದ್ದೇವೆ. ಈ ಹೊತ್ತಿನಲ್ಲಿ ಮತ್ತೆ ಅವರು ಮಾಡಿದ ತಪ್ಪುಗಳನ್ನು ಮಾಡುವುದು ಬೇಡ. ಯಾರನ್ನೂ ದ್ವೇಷಿಸುವುದು ಬೇಡ. ಎಲ್ಲ ರಂಗವನ್ನೂ ಗೌರವಿಸಿ ಎಂದು ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ ರಾಕಿಂಗ್ ಸ್ಟಾರ್. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ
ಕನ್ನಡ ಸಿನಿಮಾ ರಂಗದ ಪ್ರತಿಯೊಬ್ಬ ನಟರೂ ಮತ್ತು ತಾಂತ್ರಿಕ ತಂಡದವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೇ ಬೆಳೆಯಬೇಕು ಎನ್ನುವ ಅವರ ಆಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಎಲ್ಲರಿಗೂ ಗೆಲುವು ಸಿಗಬೇಕು ಮತ್ತು ಎಲ್ಲರೂ ಗೆಲ್ಲಬೇಕು ಎಂದ ಯಶ್, ದೇಶ ಒಂದೇ ಆಗಿರುವುದರಿಂದ ಎಲ್ಲರೂ ಪರಸ್ಪರ ಒಬ್ಬರಿಗೊಬ್ಬರನ್ನು ಗೌರವಿಸುತ್ತಾ ಒಳ್ಳೊಳ್ಳೆ ಚಿತ್ರಗಳನ್ನು ಮಾಡೋಣ ಎಂದು ಮಾತನಾಡಿದ್ದಾರೆ.