ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

Public TV
2 Min Read
Panchamasali Reservation

ಬೆಳಗಾವಿ: ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರಕ್ಕೆ ಈಗ ಪಂಚಮಸಾಲಿ(Panchamasali ) ಸಮುದಾಯದ 2ಎ ಮೀಸಲಾತಿ(Reservation) ಬೇಡಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಷ್ಟು ದಿನ ಪದೇ ಪದೇ ಡೆಡ್‍ಲೈನ್ ನೀಡುತ್ತಿದ್ದ ಪಂಚಮಸಾಲಿ ಸಮುದಾಯ ಈಗ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದೆ.

ಇಂದು ಬೆಳಗಾವಿಯಲ್ಲಿ(Belagavi) ಬೃಹತ್‌ ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಸರ್ಕಾರಕ್ಕೆ ಸನ್ಮಾನ. ಇಲ್ಲದಿದ್ದರೆ ಅಪಮಾನ ಮಾಡುವುದು ಖಚಿತ. ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಮುದಾಯದ ನಾಯಕರು ಗುಡುಗಿದ್ದಾರೆ.

ಕ್ಯಾಬಿನೆಟ್‌ ಸಭೆ
ಪಂಚಮಸಾಲಿ ಮೀಸಲಾತಿ ಹೋರಾಟ ಸಂಬಂಧ ಎಲ್ಲರ ಚಿತ್ತ ಸರ್ಕಾರದ ತೀರ್ಮಾನದತ್ತ ಇದೆ. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ(Cabinet) ನಡೆಯಲಿದೆ. ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುತ್ತಾರಾ ಅಥವಾ ಮೀಸಲಾತಿ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಸಿದ್ಧಪಡಿಸಲು ಸಂಪುಟ ಸಭೆ ವೇದಿಕೆಯಾಗುತ್ತಾ ನೋಡಬೇಕಿದೆ. ಇದನ್ನೂ ಓದಿ: ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ – ಸಿಎಂಗೆ ಅಶ್ವಥ್ ನಾರಾಯಣ ಪತ್ರ

ಪ್ರತಿಭಟನೆ ಮಾಡುತ್ತಿರುವ ಪಂಚಮಸಾಲಿಗಳಿಗೆ ಯಾವ ಭರವಸೆ ನೀಡುತ್ತದೆ ಎನ್ನುವುದರ ಬಗ್ಗೆ ಹೆಚ್ಚಿದ ಕುತೂಹಲ ಮೂಡಿಸಿದೆ. ಸರಕಾರದ ಬಳಿ ಎರಡು ಪ್ರಮುಖ ಪರಿಹಾರ ಸೂತ್ರವಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬರುವವರೆಗೆ ಕಾಯಬೇಕು. ಇಲ್ಲವೇ ಪ್ರಸ್ತುತ ಮೀಸಲಾತಿ ಪ್ರಮಾಣದ ಏರಿಕೆಗೆ ತಿರ್ಮಾನ ಮಾಡಿ 2ಎಗೆ ಶಿಫಾರಸ್ಸು ಮಾಡಬೇಕು. ಯಾಕಂದರೆ ಇನ್ನೂ 12 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನ ಬಾಕಿಯಿದೆ. ಸರ್ಕಾರದ ನಿರ್ಧಾರ ಏನು ಎನ್ನುವುದೇ ಸದ್ಯದ ಕುತೂಹಲ.

ಪಂಚಮಸಾಲಿಗಳ ಬೇಡಿಕೆ ಏನು?
ಸದ್ಯ ಪ್ರವರ್ಗ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯ ಶೇ.5 ಮೀಸಲಾತಿ ಇದೆ. ಪ್ರವರ್ಗ 2ಎಗೆ ಸೇರ್ಪಡೆ ಆದರೆ ಶೇ.15 ಮೀಸಲಾತಿ ಅನುಕೂಲ ಸಿಗಲಿದೆ. ಜನಸಂಖ್ಯೆ ಹೆಚ್ಚಳ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಆಧರಿಸಿ ಮೀಸಲಾತಿಗೆ ಒತ್ತಾಯ ಮಾಡುತ್ತಿದೆ.

ವಸ್ತುಸ್ಥಿತಿ ಏನಿದೆ?
ಪಂಚಮಸಾಲಿ ಸಮುದಾಯದ 2ಎ ಸೇರ್ಪಡೆ ಬೇಡಿಕೆ ಬಗ್ಗೆ ಪರಾಮರ್ಶೆ ಸಂಬಂಧ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸರ್ಕಾರ ವರದಿ ಕೇಳಿದೆ. ಆಯೋಗದ ವರದಿ ಪೂರ್ತಿ ಆಗಲು ಇನ್ನೂ ಕನಿಷ್ಠ 2 ತಿಂಗಳು ಬೇಕಿದೆ. ಸದ್ಯಕ್ಕೆ ಸರ್ಕಾರ ಆಯೋಗದಿಂದ ಮಧ್ಯಂತರ ವರದಿ ಕೇಳಿದೆ.

 

ಪ್ರಭಾವ ಎಷ್ಟಿದೆ?
ಒಂಥರಾ ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ಸರ್ಕಾರವಿದೆ. ಯಾಕೆಂದರೆ ಪಂಚಮಸಾಲಿ ಲಿಂಗಾಯತ ಅತ್ಯಂತ ಪ್ರಬಲ ಸಮುದಾಯ. ಈ ಸಮುದಾಯಕ್ಕೆ ಮೀಸಲಾತಿ ಕೊಡದೇ ಹೋದರೆ ಎದುರಾಗುವ ಸಂಕಷ್ಟದ ಬಗ್ಗೆಯೂ ಸರ್ಕಾರಕ್ಕೆ ಅರಿವಿದೆ. ಒಂದು ವೇಳೆ ಮತ್ತೆ ಕಣ್ಣೊರೆಸುವ ತಂತ್ರ ಮಾಡಿದರೆ ಚುನಾವಣಾ ನಷ್ಟದ ಭೀತಿ ಎದುರಾಗುವ ಆತಂಕವಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪಂಚಮಸಾಲಿ ಪ್ರಾಬಲ್ಯವೇ ಇದೆ.

ಅಂದಾಜು 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಂಚಮಸಾಲಿ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಬಲ್ಯ ಹೊಂದಿದೆ. 50ಕ್ಕೂ ಹೆಚ್ಚು ಮತ ಕ್ಷೇತ್ರಗಳಲ್ಲಿ ವರ್ಚಸ್ಸು ಹೊಂದಿದ್ದು 11 ಜಿಲ್ಲೆಗಳ ಬಹಳಷ್ಟು ಕ್ಷೇತ್ರಗಳಲ್ಲಿ ಪಂಚಮಸಾಲಿ ಮತ ನಿರ್ಣಾಯಕವಾಗಿದೆ.

ಎಲ್ಲಿ ಪ್ರಾಬಲ್ಯ?
ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬೀದರ್, ಕಲಬುರಗಿ.

Share This Article
Leave a Comment

Leave a Reply

Your email address will not be published. Required fields are marked *