ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಹೋರಾಟ ನಮಗೆ ಸ್ಪೂರ್ತಿ ಆಗಬೇಕು. ಛತ್ರಪತಿ ಶಿವಾಜಿ ಮಹಾರಾಜರು ಬಹುಜನ ಸಮಾಜದ ನಾಯಕರಾಗಿದ್ದರು. ಛತ್ರಪತಿ ಶಿವಾಜಿ (Chhatrapati Shivaji) ಮಹಾರಾಜರು ಯಾವುದೇ ಒಂದು ಜಾತಿಗೆ ಸೀಮಿತ ಆಗಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ತಾಲೂಕಿನ ಹೊನಗಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿಶೇಷ ಗೌರವ ಇದೆ. ಮೊದಲು ಕರ್ನಾಟಕ ಮಹಾರಾಷ್ಟ್ರ ಅಂತಾ ಇರಲಿಲ್ಲ. ಬೆಂಗಳೂರಿನವರೆಗೂ ಛತ್ರಪತಿ ಶಿವಾಜಿ ಮಹಾರಾಜರು ಆಳ್ವಿಕೆ ನಡೆಸಿದ್ದರು. ನಮ್ಮ ಸರ್ಕಾರ ಇದ್ದಾಗ ಬೆಳಗಾವಿಯಲ್ಲಿಯೂ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಗೆ ಒಂದು ಕೋಟಿ ಮೀಸಲು ಇಟ್ಟಿದ್ದೇವೆ. ಆದಷ್ಟು ಬೇಗ ಆ ಪ್ರತಿಮೆ ಲೋಕಾರ್ಪಣೆ ಆಗಲಿದೆ ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ಅಂತ್ಯ ಹೇಗೆ ಆಯ್ತು ಈ ಬಗ್ಗೆ ಚರ್ಚೆ ಆಗಬೇಕಿದೆ. ಛತ್ರಪತಿ ಶಿವಾಜಿ ಮಹಾರಾಜರು ಇರಲಿ, ಬಸವಣ್ಣ ಇರಲಿ, ಡಾ.ಬಿ.ಆರ್. ಅಂಬೇಡ್ಕರ್ ಇರಲಿ ಅವರಿಗೆ ಹೇಗೆ ಅನ್ಯಾಯ ಆಯ್ತು ಈ ಬಗ್ಗೆ ಚರ್ಚೆ ಆಗಬೇಕಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ದೇಶ ದ್ರೋಹಿ ಪಟ್ಟ ಕೊಡ್ತಾರೆ ಎಂದು ಕಿಡಿಕಾರಿದರು.
ಶಾಹು ಮಹಾರಾಜರ ಬಗ್ಗೆ ಕರ್ನಾಟಕದಲ್ಲಿ ವಿಶೇಷ ಗೌರವ ಇದೆ. ದಲಿತರಿಗೆ ಮೀಸಲಾತಿ ನೀಡಿ, ಬಡವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡಿದ್ದರು. ಇತಿಹಾಸವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಶಿಕ್ಷಣ, ಸಮಾಜ, ರೈತರು, ತಮ್ಮ ಮಕ್ಕಳ ಬಗ್ಗೆ ಚರ್ಚೆ ಆಗಬೇಕು. ಧರ್ಮ, ಜಾತಿ, ಭಾಷೆ ಆಮೇಲೆ ಬರುತ್ತೆ, ಮೊದಲು ಈ ಬಗ್ಗೆ ಚರ್ಚೆ ಆಗಬೇಕು ಎಂದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ
ಶಿವಾಜಿ ಮಹಾರಾಜರ ಪ್ರತಿಮೆ ಇಂದು ಲೋಕಾರ್ಪಣೆ ಆಗಿದೆ. ಅದನ್ನು ನೋಡಿದ ಮೇಲೆ ಅವರ ಹೋರಾಟ ನಮಗೆ ನೆನಪಾಗಬೇಕು. ಕೇವಲ ಮರಾಠಿಗರಷ್ಟೇ ಅಲ್ಲ ಸರ್ವ ಜನಾಂಗದ ರಕ್ಷಣೆ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆದಿದ್ದಕ್ಕೆ ಖುಷಿ ಆಗುತ್ತಿದೆ. ಸುಳ್ಳಿನ ವಿರುದ್ಧ ಹೋರಾಟ ಮಾಡುವವ ನಾನು. ಯಾವುದೇ ಎಂಎಲ್‌ಎ, ಎಂಪಿ ಹುದ್ದೆಗಾಗಿ ನಾನಿಲ್ಲ. ಸಮಾಜಕ್ಕೆ ಸತ್ಯ ಹೇಳುವ ಕೆಲಸ ನಮ್ಮದಿ ಇದೆ, ಸತ್ಯ ಏನಿದೆ ಆ ಸತ್ಯ ಹೇಳಬೇಕಿದೆ ಎಂದರು.
ಕನ್ನಡ ಮರಾಠಿ ಭೇದ ಇಲ್ಲ ಎಲ್ಲರೂ ಒಗ್ಗೂಡಿ ಹೋಗಬೇಕು. ಕನ್ನಡ ಮರಾಠಿ ಭೇದಭಾವದಿಂದ ನಮಗೇನೂ ಲಾಭವಿಲ್ಲ ನಷ್ಟವೇ ಇದೆ.ಎಲ್ಲರೂ ಒಗ್ಗೂಡಿ ಹೋಗೋಣ ಎಂದು ನಾನು ವಿನಂತಿ ಮಾಡುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜರ ಹೋರಾಟ ನಮಗೆ ಪ್ರೇರಣೆ ಆಗಲಿ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ