ರಾಕಿಂಗ್ ಸ್ಟಾರ್ ಯಶ್ ಸದ್ಯ ಆರಾಮಾಗಿ ಕಾಲಕಳೆಯುತ್ತಿದ್ದಾರೆ ಎನ್ನುತ್ತಿದೆ ಗಾಂಧಿನಗರ. ಆದರೆ, ಯಶ್ ಅಂದುಕೊಂಡಂತಿಲ್ಲ. ಮುಂದಿನ ಸಿನಿಮಾಗೆ ಏನೆಲ್ಲ ಬೇಕೊ ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಜಿಎಫ್ 2 ಸಿನಿಮಾದ ಭಾರೀ ಯಶಸ್ಸಿನ ನಂತರ ಅವರು ಜಾಣೆ ನಡೆಯನ್ನು ತೋರುತ್ತಿದ್ದಾರೆ. ಹೀಗಾಗಿಯೇ ಮುಂದಿನ ಸಿನಿಮಾ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಬಿಟ್ಟು ಕೊಡುತ್ತಿಲ್ಲ.
ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಈವರೆಗೂ ಸ್ಪಷ್ಟತೆ ಇಲ್ಲ. ಈಗಾಗಲೇ ಹಲವು ನಿರ್ದೇಶಕರ ಹೆಸರು ಕೇಳಿ ಬಂದಿವೆ, ನಿರ್ಮಾಣ ಸಂಸ್ಥೆಗಳ ಹೆಸರುಗಳನ್ನು ತಳುಕು ಹಾಕಲಾಗಿದೆ. ಯಾವ ಭಾಷೆಯಲ್ಲಿ ಅವರು ಸಿನಿಮಾ ಮಾಡಲಿದ್ದಾರೆ ಎನ್ನುವ ಕುರಿತು ಚರ್ಚೆ ಕೂಡ ನಡೆದಿದೆ. ಆದರೆ, ಇದಾವುದನ್ನೂ ಯಶ್ ಖಚಿತ ಪಡಿಸಿಲ್ಲ. ಮಾಧ್ಯಮಗಳ ಮುಂದೆ ಎದುರಾದಾಗೊಮ್ಮೆ ಅವಸರ ಮಾಡುವುದಿಲ್ಲ. ಎಲ್ಲವನ್ನೂ ನಾನೇ ಹೇಳುತ್ತೇನೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ
ಆದರೆ, ಜನವರಿ 8 ರಂದು ಯಶ್ ಕೆಲವು ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಯಶ್ ಹುಟ್ಟು ಹಬ್ಬ. ಈ ದಿನದಂದು ತಮ್ಮ ನಿರ್ಮಾಣ ಸಂಸ್ಥೆಯ ಬಗ್ಗೆ ಕೆಲವು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಗಳ ಹೆಸರಿನಲ್ಲಿ ಬ್ಯಾನರ್ ಶುರು ಮಾಡುವ ಆಲೋಚನೆಯನ್ನು ಯಶ್ ಮಾಡಿದ್ದು, ಈ ಕುರಿತು ಅಂದು ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.