ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭೀಕರ್ ಹತ್ಯೆಯ ಪ್ರಕರಣಕ್ಕೆ ಇದೀಗ ದೊಡ್ಡ ಸಾಕ್ಷ್ಯ ದೊರೆತಿದೆ. ಕೊಲೆಗಾರ ಅಫ್ತಾಬ್ ಪೂನಾವಾಲಾ (Aftab Poonawala) ದೆಹಲಿಯ (Delhi) ಮೆಹ್ರೌಲಿ ಹಾಗೂ ಗುರುಗ್ರಾಮದ ಕಾಡುಗಳಲ್ಲಿ ಪೊಲೀಸರನ್ನು ಕರೆದೊಯ್ದಾಗ ದೊರೆತಿರುವ ಮೂಳೆಗಳು ಯುವತಿ ಶ್ರದ್ಧಾ ವಾಕರ್‌ದು (Shraddha Walkar) ಎಂಬುದು ದೃಢವಾಗಿದೆ.
ಅಫ್ತಾಬ್ ಪೂನಾವಾಲಾ ಶ್ರದ್ಧಾ ಕೊಲೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಕಾಡುಗಳಲ್ಲಿ ಹೂತು ಹಾಕಿದ್ದ. ಈ ದೇಹದ ಭಾಗಗಳನ್ನು ತನಿಖೆಯ ವೇಳೆ ಪೊಲೀಸರು ಸಂಗ್ರಹಿಸಿದ್ದರು. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಡಿಎನ್‌ಎಗೆ ಹೋಲಿಕೆಯಾಗುತ್ತದೆ ಎಂಬುದು ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.
ಅಫ್ತಾಬ್ ಮೇ ತಿಂಗಳಿನಲ್ಲಿ ತನ್ನ ಗೆಳತಿ ಶ್ರದ್ಧಾ ವಾಕರ್ ಹತ್ಯೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ಬಳಿಕ ದೇಹದ ತುಂಡುಗಳನ್ನು ಸುಮಾರು 18 ದಿನಗಳ ಕಾಲ ಒಂದೊಂದಾಗಿಯೇ ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ್ದ. ಕಳೆದ ಒಂದು ತಿಂಗಳ ಹಿಂದೆ ಶ್ರದ್ಧಾ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ್ದರು. ಬಳಿಕ ತನಿಖೆಯ ವೇಳೆ ಶ್ರದ್ಧಾ ಹತ್ಯೆಯ ಹಿಂದಿನ ಭಯಾನಕ ಸತ್ಯವನ್ನು ಒಂದೊಂದಾಗಿಯೇ ಪೊಲೀಸರು ಬಯಲಿಗೆಳೆದಿದ್ದಾರೆ.
ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರದ್ದೂ ಅಂತರ್ ಧರ್ಮೀಯ ಸಂಬಂಧ ಎಂಬ ಕಾರಣಕ್ಕೆ ಇಬ್ಬರ ಕುಟುಂಬದವರೂ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಜೋಡಿ ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡು ಮೆಹ್ರೌಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸವಿದ್ದರು. ಇತ್ತೀಚೆಗೆ ಶ್ರದ್ಧಾ ಹಲವು ತಿಂಗಳುಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಆಕೆಯ ತಂದೆ ದೆಹಲಿಗೆ ತೆರಳಿ ಆಕೆಯ ಹುಡುಕಾಟ ನಡೆಸಿದ್ದರು. ಆದರೆ ಆಕೆಯ ಪತ್ತೆಯಾಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕಾಸ್ ವಾಕರ್, 2 ವರ್ಷಗಳ ಹಿಂದೆ ನನ್ನ ಮಗಳು ಅಫ್ತಾಬ್‌ನಿಂದ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಅಂದೇ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದರೆ ಇಂದು ಆಕೆ ಬದುಕಿರುತ್ತಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ