ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವುದಾಗಿ ವೈದ್ಯರು (Doctors) ತಿಳಿಸಿದ್ದಾರೆ.
ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ (Health Department) ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೆ. ಗ್ರಾಮದ ವಾತಾವರಣ ಬಗ್ಗೆ ಅಧ್ಯಯನವನ್ನೂ ನಡೆಸಿದೆ. ಇದನ್ನೂ ಓದಿ: ಸತತ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಭೂಪೇಂದ್ರ ಪಟೇಲ್
5 ವರ್ಷದ ಮಗುವಿಗೆ ಜ್ವರ ಹೆಚ್ಚಾಗಿದ್ದರಿಂದ ರಾಯಚೂರಿನಿಂದ ಬಳ್ಳಾರಿಯ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣಗಳು ಇತ್ತೆಂದು ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಎಲ್ಲವೂ ನೆಗೆಟಿವ್ ಬಂದಿದ್ದರಿಂದ ಮಗುವಿನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿತು. ಆದ್ರೆ ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೂ ಇರಲಿಲ್ಲ. ವರದಿ ಕೈ ಸೇರುವಷ್ಟರಲ್ಲಿ ಸಂಪೂರ್ಣ ಗುಣಮುಖವಾಗಿತ್ತು. ಆರೋಗ್ಯ ಇಲಾಖೆ ಮತ್ತೊಮ್ಮೆ ಕಳುಹಿಸಿದ್ದ ಬಾಲಕಿ ಹಾಗೂ ಪೋಷಕರ ಮಾದರಿಗಳು ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.
ಸದ್ಯ ಮಗು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಝಿಕಾ ವೈರಸ್ ಪತ್ತೆ ಹಿನ್ನಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸಾಂಕ್ರಾಮಿಕ ರೋಗ ತಜ್ಞರ ವಿಶೇಷ ತಂಡ ಕೋಲ್ಕತ್ತಾದಿಂದ ಬಂದಿದ್ದು ಪರಿಶೀಲನೆ ನಡೆಸಿದೆ. ಮಗು ವಾಸವಾದ ಸ್ಥಳ ಹಾಗೂ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ
ಝಿಕಾ ವೈರಸ್ ಲಕ್ಷಣಗಳು: ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಜ್ವರ, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವುಗಳು ಕಂಡುಬರುತ್ತದೆ. ಇದು ಸೊಳ್ಳೆ ಕಡಿತದಿಂದ ಉಂಟಾಗುವ ರೋಗವಾಗಿದೆ. ಗರ್ಭಿಣಿಯರು ಹೆಚ್ಚಾಗಿ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.