ನವದೆಹಲಿ: ಚಲಾವಣೆಯಿಂದ 2,000 ರೂ. ಮುಖಬೆಲೆಯ ನೋಟುಗಳನ್ನು (Rs 2000 Notes) ಹಿಂಪಡೆಯುವುದಾಗಿ ಘೋಷಣೆ ಮಾಡಿದ ಬಳಿಕ ಇದುವರೆಗೆ ಸುಮಾರು 98.08% ರಷ್ಟು ಹಣ ಬ್ಯಾಂಕುಗಳಿಗೆ (Bank) ವಾಪಸ್ಸಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.
2023ರ ಮೇ 19ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ಬಳಿಕ ಒಟ್ಟು 3.56 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು. ಅಂದಿನಿಂದ 2 ಸಾವಿರ ರೂ. ನೋಟುಗಳ ಚಲಾವಣೆ ಗಮನಾರ್ಹವಾಗಿ ಕಡಿಮೆಯಾಗಿದ್ದು 2024 ರ ಅಂತ್ಯದ ವೇಳೆಗೆ ಕೇವಲ 6,691 ಕೋಟಿ ರೂ. ಚಲಾವಣೆಯಲ್ಲಿದೆ ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!
Advertisement
Advertisement
2016ರ ನವೆಂಬರ್ 8 ರಂದು 500 ಹಾಗೂ 1,000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2,000 ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಆದರೆ 2018ರಲ್ಲಿಯೇ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ (Central Govt) ಮಾಹಿತಿ ನೀಡಿತ್ತು.
Advertisement
ಹೊಸ 2,000 ರೂ. ನೋಟುಗಳನ್ನು ನೇರವಾಗಿ ನಿಷೇಧ ಮಾಡದೇ ಇದ್ದರೂ ಆರ್‌ಬಿಐ ಹಂತ ಹಂತವಾಗಿ ಮುದ್ರಣವನ್ನು ಕಡಿಮೆ ಮಾಡುತ್ತಾ ಬಂದಿತ್ತು. ಅಂತಿಮವಾಗಿ ಮೇ 19, 2023 ರಂದು 2,000 ರೂ. ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್ ಆದೇಶ
Advertisement
ಕ್ಲೀನ್ ನೋಟ್ ಅಭಿಯಾನದಡಿ ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಅನುಮತಿ ಇತ್ತು. ಈ ಗಡುವು ಮುಗಿದ ಬಳಿಕ ತನ್ನ 19 ವಿತರಣಾ ಕಚೇರಿಗಳಲ್ಲಿ ಈ ಸೇವೆ ಒದಗಿಸುವುದನ್ನು ಆರ್‌ಬಿಐ ಈಗಲೂ ಮುಂದುವರೆಸಿದೆ.
2,000 ರೂ. ನೋಟುಗಳು ಚಲಾವಣೆ ಇಲ್ಲದೇ ಇದ್ದರೂ ಈಗಲೂ ಕಾನೂನು ಮಾನ್ಯತೆಯನ್ನು ಹೊಂದಿದೆ. ಜನರು ಲಭ್ಯವಿರುವ ವ್ಯವಸ್ಥೆಯ ಮೂಲಕ ಮೂಲಕ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು. ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಭಾರತೀಯ ಅಂಚೆ ಮೂಲಕ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಬಹುದು.
ಸದ್ಯ ಎಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ?
ಆರ್‌ಬಿಐಯ ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಕಚೇರಿ ತೆರಳಿ ವಿನಿಮಯ ಅಥವಾ ಠೇವಣಿ ಇಡಬಹುದು.