ನವದೆಹಲಿ: 91 ವರ್ಷದ ವೃದ್ಧ ವ್ಯಕ್ತಿಯನ್ನು ಅವರ ಮನೆಯ ಕೆಲಸದವನ ಸಹಾಯದಿಂದಲೇ ಅಪಹರಿಸಿ, ಫ್ರಿಡ್ಜ್‌ನಲ್ಲಿ ಸಾಗಿಸಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ಕಿಶನ್ ತನ್ನ ಮಾಲೀಕ ಕೃಷ್ಣಾ ಖೋಸ್ಲಾ ಅವರೊಂದಿಗೆ ಅಸಮಾಧಾನಗೊಂಡು ಅವರ ಅಪಹರಣಕ್ಕೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಶನಿವಾರ ಸಂಜೆ, ಗ್ರೇಟರ್ ಕೈಲಾಶ್-2 ಪ್ರದೇಶದ ಖೋಸ್ಲಾ ಅವರ ಮನೆಗೆ ಟೆಂಪೋದಲ್ಲಿ ಇತರ ಐವರೊಂದಿಗೆ ಕಿಶನ್ ಆಗಮಿಸಿ, ತನ್ನ ಯಜಮಾನನನ್ನು ಅಪಹರಿಸಿದ್ದಾನೆ. ಖೋಸ್ಲಾ ಹಾಗೂ ಅವರ ಪತ್ನಿಯನ್ನು ಈ ಆರು ಜನ ಸೇರಿ ಪ್ರಜ್ಞೆ ತಪ್ಪಿಸಿದ್ದು, ನಂತರ ಖೋಸ್ಲಾ ಅವರನ್ನು ಅಪಹರಿಸಿ ಫ್ರಿಡ್ಜ್‌ನಲ್ಲಿ ಕೂಡಿಹಾಕಿಕೊಂಡು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಕಿಶನ್ ಬಿಹಾರ ಮೂಲವನಾಗಿದ್ದು, ಖೋಸ್ಲಾ ಅವರ ಮನೆಯಲ್ಲಿ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸದ ವಿಚಾರದಲ್ಲಿ ಅಸಮಾಧಾನಗೊಂಡು ಅಪಹರಿಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳೀಯರು ದಿಗ್ಭ್ರಮೆಗೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಆದರೆ ಈ ರೀತಿ ಒಬ್ಬ ವ್ಯಕ್ತಿಯನ್ನು ಅಪಹರಿಸಿ, ಫ್ರಿಡ್ಜ್‌ನಲ್ಲಿ ಕೂಡಿ ಹಾಕಿಕೊಂಡು ಹೋಗಿರುವುದನ್ನು ಕೇಳಿದ್ದು ಇದೇ ಮೊದಲು ಎಂದು ಅಲ್ಲಿನ ನಿವಾಸಿ ಶ್ಯಾಮ್ ಕಲ್ರಾ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲು ಹಲವು ಪೊಲೀಸರ ತಂಡವನ್ನು ರಚಿಸಲಾಗಿದೆ.