ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery River’s Catchment Area) ಭಾರೀ ಮಳೆ ಬೀಳುತ್ತಿರುವ ಕಾರಣ ಕೃಷ್ಣರಾಜಸಾಗರ ಜಲಾಶಯದಿಂದ (KRS Dam) 91 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮಳೆ ಮತ್ತೆ ಜಾಸ್ತಿಯಾದರೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಡುವ ಸಾಧ್ಯತೆಯಿದೆ. 124.80 ಅಡಿ ಎತ್ತರದ ಜಲಾಶಯಕ್ಕೆ ಸದ್ಯ 70 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ. ಇದನ್ನೂ ಓದಿ: ಜನರೇ ಗಮನಿಸಿ, ಇಂದು 3 ಜಿಲ್ಲೆಗೆ ರೆಡ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವ ಕಾರಣ ಜಲಾಶಯದ ಕೆಳ ಭಾಗದಲ್ಲಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು ಶ್ರೀರಂಗಪಟ್ಟಣದಲ್ಲಿರುವ 221 ವರ್ಷ ಹಳೆಯದಾದ ಬ್ರಿಟಿಷರ ಕಾಲದ ವೆಲ್ಲೆಸ್ಲಿ ಸೇತುವೆ (Wellesley Bridge) ಯಾವುದೇ ಕ್ಷಣದಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ.
ಸದ್ಯ ಭಾರೀ ಪ್ರಮಾಣ ನೀರು ಬಿಟ್ಟಿರುವ ಕಾರಣ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿಂದೆ ಈ ಸೇತುವೆ ಮೈಸೂರು- ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತಿತ್ತು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.