ಮುಂಬೈ: 90 ವರ್ಷದ ವೃದ್ಧೆಯೊಬ್ಬರು ತಮ್ಮ ಚಿತೆಗೆ ತಾನೇ ಬೆಂಕಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಬಾಮನಿ ಗ್ರಾಮದಲ್ಲಿ ನಡೆದಿದೆ.
ಕಲ್ಲವ್ವ ದಾಡು ಕಾಂಬ್ಳೆ ಸಾವಿಗೆ ಶರಣಾದ ವೃದ್ಧೆ. ಇವರು ನವೆಂಬರ್ 13 ರಂದು ರಾತ್ರಿ ತಮ್ಮ ಮನೆಯಲ್ಲಿಯೇ ಚಿತೆಯನ್ನು ಸಿದ್ಧ ಪಡಿಸಿಕೊಂಡಿದ್ದು, ನಂತರ ಬೆಂಕಿ ಹಾಕಿಕೊಂಡು ತಮ್ಮ ಜೀವನವನ್ನು ಕೊನೆಯಾಗಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ನಡೆದಿದ್ದೇನು? ಕಲ್ಲವ್ವನ 57 ವರ್ಷದ ಮಗನಾದ ವಿಠಲ್ ಅದೇ ಗ್ರಾಮದಲ್ಲಿ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದರು. ಮಗ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಊಟ-ತಿಂಡಿಗೂ ಕಲ್ಲವ್ವ ಮಗನನ್ನೇ ಆಶ್ರಯಿಸಿದ್ದರು.
Advertisement
ನ.13 ರಾತ್ರಿ ತನ್ನ ಮೊಮ್ಮಗಳು ಮನೆಗೆ ಬಂದು ಊಟ ಕೊಟ್ಟು ಹೋಗಿದ್ದಳು. ನಂತರ ಕಲ್ಲವ್ವ ತಾನು ಇದ್ದ ಮನೆಯ ಬಾಗಿಲನ್ನು ಲಾಕ್ ಮಾಡಿಕೊಂಡು ಮಲಗಲು ಹೋಗಿದ್ದಾರೆ. ಆದರೆ ಮನೆಯ ಒಳಗಡೆ ಮರದ ತುಂಡುಗಳು, ಹಸುವಿನ ಬೆರಣಿ, ಸೀಮೆ ಎಣ್ಣೆ ಮತ್ತು ಬೆಂಕಿ ಕಡ್ಡಿಯನ್ನು ಇಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.
Advertisement
ಮಾರನೇ ದಿನ ಮೊಮ್ಮಗಳು ಮತ್ತೆ ಅಜ್ಜಿಯ ಮನೆಗೆ ಹಾಲು ಕೊಡಲು ಬಂದಿದ್ದಾಳೆ. ಆದರೆ ಎಷ್ಟು ಬಾರಿ ಬಾಗಿಲು ಬಡಿದರೂ ಕಲ್ಲವ್ವ ಬಾಗಿಲು ತೆರೆಯಲಿಲ್ಲ. ನಂತರ ಆಕೆ ತಂದೆಗೆ ವಿಷಯವನ್ನು ತಿಳಿಸಿದ್ದಾಳೆ. ಮಗ ವಿಠಲ್ ತಾಯಿಯ ಮನೆಗೆ ಧಾವಿಸಿ ಬಂದು ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಆದರೆ ಒಳಗೆ ರೂಮಿನ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದ ತಾಯಿಯ ಸುಟ್ಟಿರುವ ಅರ್ಧ ದೇಹವನ್ನು ನೋಡಿದ್ದಾರೆ.
ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದೇವೆ. ಸಾವಿಗೆ ಬೇರೆ ಏನಾದರೂ ಕಾರಣ ಇರಬಹುದೇ ಎಂದು ತನಿಖೆಯನ್ನು ಮಾಡುತ್ತಿದ್ದೇವೆ. ಆದರೆ ಕಲ್ಲವ್ವ ಈ ರೀತಿ ಮಾಡಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಸೂಪರಿಟೆಂಡೆಂಟ್ ಪೊಲೀಸ್ ಸಂಜಯ್ ಮೋಹಿಟೆ ಅವರು ಹೇಳಿದ್ದಾರೆ.