ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಮಾರಾಟ ಮಾಡುವುದು ಭಾರತ ಸರ್ಕಾರ ಜನರ ಮೇಲೆ ಮಾಡುತ್ತಿರುವ ಶೋಷಣೆ. ಪೆಟ್ರೋಲ್ ರಿಫೈನರಿಗಳಲ್ಲಿ ಪ್ರತಿ ಲೀಟರ್ ಬೆಲೆ 30 ರೂ. ಆಗುತ್ತದೆ. ತೆರಿಗೆ ಮತ್ತು ಪೆಟ್ರೋಲ್ ಪಂಪ್‌ಗಳ ಕಮಿಷನ್‌ನಿಂದಾಗಿ ಉಳಿದ 60 ರೂ. ಹೆಚ್ಚಳವಾಗುತ್ತದೆ. ನನ್ನ ದೃಷ್ಟಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು ಗರಿಷ್ಟ 40 ರೂ.ಗೆ ಮಾರಾಟ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
Petrol price at Rs. 90 per litre is a monumental exploitation by GoI of the people of India. The price ex-refinery of petrol is Rs. 30/litre. All kinds of taxes and Petrol pump commission add up the remainder Rs.60. In my view petrol must sell at max. Rs. 40 per litre.
— Subramanian Swamy (@Swamy39) December 7, 2020
2018ರ ಬಳಿಕ ಮುಂಬೈಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 90 ರೂ. ಗಡಿ ದಾಟಿದೆ. ಮುಂಬೈ ಅಲ್ಲದೇ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.50 ರೂ., ಔರಂಗಬಾದ್ 91.57 ರೂ., ಇಂದೋರ್ 91.58 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಇನ್ನೂ ಬಂದಿಲ್ಲ ಯಾಕೆ? ಸರ್ಕಾರಗಳ ನಿಲುವು ಏನು?
ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಭಾರತದಲ್ಲಿ ಮತ್ತಷ್ಟು ತೈಲ ದರ ಏರಬಹುದು ಎಂದು ಹೇಳಿದ್ದಾರೆ. ಸೋಮವಾರ ಒಂದು ಬ್ಯಾರಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 48.74 ಡಾಲರ್(3,600 ರೂ.) ಆಗಿದ್ದರೆ, ವೆಸ್ಟ್ ಟೆಕ್ಸಸ್ ಇಂಟರ್‌ಮೀಡಿಯಟ್ 45.74 ಡಾಲರ್(3,300 ರೂ.)ಗೆ ಏರಿಕೆಯಾಗಿದೆ.
ಏರಿಕೆ ಯಾಕೆ?
ಕೋವಿಡ್ 19ಗೆ ಶೀಘ್ರವೇ ಲಸಿಕೆ ಲಭ್ಯವಾಗಲಿದೆ. ಲಸಿಕೆ ಅಭಿವೃದ್ಧಿಪಡಿಸಿದ ನಂತರ ತೈಲೋತ್ಪನ್ನಗಳ ಬೇಡಿಕೆಯು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಿಂದಾಗಿ ಕಚ್ಚಾ ತೈಲ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಲಸಿಕೆ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಕಂಪನಿಗಳು ತಿಳಿಸಿದ ಬೆನ್ನಲ್ಲೇ ಭಾರತದಲ್ಲಿ ಕಳೆದ 18 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.65 ರೂ. ಏರಿಕೆ ಆಗಿದ್ದರೆ ಡೀಸೆಲ್ ಬೆಲೆ 3.41 ರೂ. ಏರಿಕೆಯಾಗಿದೆ. ಅಬಕಾರಿ ಸುಂಕ, ಡೀಲರ್ ಕಮೀಷನ್, ರಾಜ್ಯ ಸರ್ಕಾರದ ತೆರಿಗೆ, ಸಾಗಾಟ ವೆಚ್ಚ ಎಲ್ಲ ಸೇರಿ ತೈಲ ಬೆಲೆ ಭಾರತದಲ್ಲಿ ನಿಗದಿಯಾಗುತ್ತದೆ.