ಶ್ರೀನಗರ: 9 ವರ್ಷದ ಬಾಲಕಿ ಮೇಲೆ ಮಲ ಸಹೋದರ ಸೇರಿದಂತೆ ಆತನ ಸ್ನೇಹಿತರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಾಯಿ ಮತ್ತು ಮಲ ಸಹೋದರ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಅಗಸ್ಟ್ 23 ರಂದು ಉರಿ ನಿವಾಸಿಯಾಗಿರುವ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಭಾನುವಾರ ಬಾಲಕಿಯ ಮೃತದೇಹ ಹತ್ತಿರದ ಅರಣ್ಯ ಪ್ರದೇಶದ ಪತ್ತೆಯಾಗಿದ್ದು, ಈ ಸಂಬಂಧ ಈ ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಹೇಳಿದ್ದಾರೆ.
ಎಸ್‍ಐಟಿ ಈ ಕುರಿತು ಮಲ ತಾಯಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿರುವ ವಿಚಾರ ಬಳಕಿಗೆ ಬಂದಿದೆ.
ಪತಿಯ ಎರಡನೆಯ ಹೆಂಡತಿ ಮತ್ತು ಆಕೆಯ ಮಕ್ಕಳ ಮೇಲೆ ಮಲತಾಯಿ ದ್ವೇಷ ಹೊಂದಿದ್ದಳು. ಹರಿತವಾದ ಚಾಕುವನ್ನು ತಯಾರಿ ಮಾಡಿ ಬಾಲಕಿಯನ್ನು ಹತ್ತಿರವಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಲ ತಾಯಿಯ 14 ವರ್ಷದ ಮಗ ಹಾಗೂ ಆತನ ಸ್ನೇಹಿತರು ಸೇರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಬಾಲಕಿಯನ್ನು ಕಟ್ಟಿ ಹಾಕಿ ಸಹೋದರ ಕೊಡಲಿಯಿಂದ ತಲೆ ಹೊಡೆದಿದ್ದಾನೆ. ಮತ್ತೊಬ್ಬ ಆರೋಪಿ ಬಾಲಕಿಯ ಕಣ್ಣುಗಳ ಮೇಲೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮೃತ ದೇಹವನ್ನು ಪೊದೆಯೊಳಗೆ ಎಸೆದು ಕೊಂಬೆಗಳಿಂದ ಮರೆಮಾಡಿದ್ದಾರೆ. ಈ ಎಲ್ಲ ಕೃತ್ಯ ನಡೆಯುವಾಗ ಸ್ಥಳದಲ್ಲೇ ಮಲತಾಯಿ ನಿಂತಿದ್ದಳು ಎಂದು ಪೊಲೀಸರು ತಿಳಿಸಿದರು.
ಕೃತ್ಯಕ್ಕೆ ಬಳಸಿದ್ದ ಕೊಡಲಿ ಮತ್ತು ಚಾಕುವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv