ಇಂದೋರ್: ಮಾಲ್ ವೊಂದರ ಗೇಮಿಂಗ್ ಝೋನ್ ಬಳಿ 9 ವರ್ಷದ ಅಪ್ರಾಪ್ತೆಯ ಮೇಲೆ ಅಲ್ಲಿನ ನೌಕರ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಘಟನೆ ನಗರದ ಎಂಜಿ ನಗರ ಪ್ರದೇಶದ ಟ್ರೆಶರ್ ಮಾಲ್ ನಲ್ಲಿ ಗುರುವಾರ ನಡೆದಿದೆ. ಸಂತ್ರಸ್ತೆ ಗೇಮಿಂಗ್ ಝೋನ್ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ನೌಕರ ಅರುಣ್ ರಾಥೋರ್(19) ಈ ಕೃತ್ಯ ಎಸಗಿದ್ದಾನೆ.
ಸಂತ್ರಸ್ತೆ ಕುಟುಂಬದವರ ಜೊತೆ ಮಾಲ್ ಗೆ ಹೋಗಿದ್ದಳು. ಮಾಲಿನಲ್ಲಿ ಆಕೆ ಆಟವಾಡಲು ಗೇಮಿಂಗ್ ಝೋನ್ ಒಳಗೆ ಹೋಗಿದ್ದಾಳೆ. ಆಕೆಯ ತಾಯಿ ಗೇಮಿಂಗ್ ಝೋನ್ ಹೊರಗಡೆ ನಿಂತಿದ್ದರು. ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ರಾಥೋರ್ ಅಪ್ರಾಪ್ತೆಯನ್ನ ಒಂದು ಮೂಲೆಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಂತ್ರಸ್ತೆ ಹೊರ ಬಂದು ನಡೆದ ಘಟನೆ ಬಗ್ಗೆ ತಾಯಿಯ ಬಳಿ ವಿವರಿಸಿದ್ದಾಳೆ. ವಿಚಾರ ತಿಳಿದ ತಾಯಿ ಮತ್ತು ಅಲ್ಲೇ ಇದ್ದ ಸಾರ್ವಜನಿಕರು ಆರೋಪಿ ರಾಥೋರ್ ನನ್ನು ಹಿಡಿದು ಥಳಿಸಿದ್ದಾರೆ.
ಆರೋಪಿ ರಾಥೋರ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯಕ್ಕೆ ಆತನನ್ನು ಬಂಧಿಸಲಾಗಿದ್ದು, ಪೋಕ್ಸೋ ಕಾಯ್ಡೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂದೂರ್ ನ ಡಿಐಜಿ ಹರಿನಾರಾಯಣ್ ಚಾರಿ ಮಿಶ್ರಾ ಹೇಳಿದ್ದಾರೆ.
ಮಹಿಳಾ ದಿನಾಚರಣೆಯಂದೇ ಈ ಘಟನೆ ನಡೆದಿರುವುದಕ್ಕೆ ವಿರೋಧ ಪಕ್ಷ ಕಾಂಗ್ರೆಸ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದೆ.