ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿವಿಗಳನ್ನು ಮುಚ್ಚುವ ಸಾಧ್ಯತೆ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ಉಪ ಸಮಿತಿ ಈ ತೀರ್ಮಾನ ಕೈಗೊಂಡಿದೆ.
ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಕುರಿತು ಪರಿಶೀಲನೆಗೆ ಸರ್ಕಾರ ಸಂಪುಟ ಉಪ ಸಮಿತಿ ರಚಿಸಿದೆ. ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ನೃಪತುಂಗ ವಿಶ್ವವಿದ್ಯಾಲಯ ಸೇರಿ ಎಲ್ಲಾ 9 ವಿವಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ.
ಬೀದರ್ ವಿಶ್ವವಿದ್ಯಾಲಯ 150 ಸಂಯೋಜಿತ ಕಾಲೇಜುಗಳನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಿಶ್ವವಿದ್ಯಾಲಯ ಸುಗಮವಾಗಿ ನಡೆಯಲು ಸಂಯೋಜಿತ ಕಾಲೇಜುಗಳ ಶುಲ್ಕ ಮುಖ್ಯ. ಆದ್ದರಿಂದ ಈ ವಿವಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ವಾಹನ ಖರೀದಿಸಲು ಹಣಕಾಸಿನ ಕೊರತೆಯಿದೆ. ಹೊಸ ವಿವಿಗಳನ್ನು ನಡೆಸಲು ಸರ್ಕಾರ ದೊಡ್ಡ ಮೊತ್ತದ ಹಣ ನೀಡಬೇಕಿದೆ. ಹೊಸ ವಿವಿಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ಅಗತ್ಯವಿದೆ. ಬಹುತೇಕ ವಿವಿಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ.
342 ಕೋಟಿ ಮೊತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲಸೌಕರ್ಯ, ಸಲಕರಣೆ, ವಾಹನ, ಪೀಠೋಪಕರಣ ಇತರೆ ವಸ್ತುಗಳ ಖರೀದಿ ಅಗತ್ಯವಿದೆ. ಹಾಸನ, ಚಾಮರಾಜನಗರ ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್ ಮಂಡ್ಯ, ನೃಪತುಂಗ ಯೂನಿವರ್ಸಿಟಿಗೆ ಬೀಗ ಬೀಳುವ ಸಾಧ್ಯತೆ ಇದೆ.