9 ಹೊಸ ವಿಶ್ವವಿದ್ಯಾಲಯ ಉದ್ಘಾಟಿಸಿದ ಸಿಎಂ

Public TV
2 Min Read
Basavaraj Bommai 1 3

– ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು: ಬೊಮ್ಮಾಯಿ

ಬೆಂಗಳೂರು: ಮಂಗಳವಾರ ಆರಂಭಿಸಿರುವ ಎಲ್ಲ ವಿಶ್ವವಿದ್ಯಾಲಯಗಳು (University) ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಂಭತ್ತು ನೂತನ ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣ ಬೆಳವಣಿಗೆ ಆಗಬೇಕು. ಈ ರೀತಿಯ ವಿಶ್ವವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲರೂ ಕರ್ನಾಟಕದ ಮಾದರಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.

basavaraj bommai 5

ದೇಶದಲ್ಲಿ ಉನ್ನತ ಶಿಕ್ಷಣ ಅಂದರೆ ಐಐಟಿ. ಅದಕ್ಕೆ ಸಿಇಟಿ ಮೂಲಕ ಆಯ್ಕೆ ಆಗಬೇಕು. ನಮ್ಮ ಮಕ್ಕಳೂ ಐಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಕೆಐಟಿ ಸ್ಥಾಪನೆ ಮಾಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳು ಐಐಟಿ ಮಾದರಿಯಲ್ಲಿ ಇರಲಿವೆ. ಐಐಟಿ ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ. ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ನಾಡಿನ ಭವಿಷ್ಯ. ಈಗ 21ನೇ ಶತಮಾನ ಜ್ಞಾನದ ಶತಮಾನ. ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಮೋದಿಯಂಥ ಪ್ರಧಾನಿ ಬೇಕು ಅಂತ ಹೇಳುತ್ತಿದ್ದಾರೆ. ಚೀನಾ ಕೂಡ ಭಾರತ ಕೊರೊನಾ ನಿಯಂತ್ರಣ ಮಾಡಿದ್ದನ್ನು ಮೆಚ್ಚಿಕೊಂಡಿದೆ ಎಂದರು. ಶಿಕ್ಷಣ ಸಂಸ್ಥೆ ಅಂದರೆ ಪಾವಿತ್ರ್ಯತೆ. ಸಂಸ್ಥೆಗಳು ಸರಸ್ವತಿಯ ವಾಹನ ಪರಮಹಂಸ ಕೂಡ ಪವಿತ್ರವಾಗಿದ್ದು, ವಿದ್ಯಾರ್ಥಿಗಳು ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಆಕ್ರಮಣ ಮತ್ತಷ್ಟು ಕಠಿಣವಾಗಲಿದೆ, ಎದುರಿಸಲು ನಾವು ಸಿದ್ಧವಿರಬೇಕು: ಸಂಸದರಿಗೆ ಮೋದಿ ಕರೆ

9 ನೂತನ ವಿವಿಗಳು: ಚಾಮರಾಜನಗರ ವಿವಿ, ಹಾಸನ ವಿವಿ, ಮಂಡ್ಯ ವಿವಿ, ಬೀದರ್ ವಿವಿ, ಕೊಡಗು ವಿವಿ, ಕೊಪ್ಪಳ ವಿವಿ, ಬಾಗಲಕೋಟೆ ವಿವಿ, ಹಾವೇರಿ ವಿವಿ, ರಾಯಚೂರು ವಿವಿಗಳಾಗಿವೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಬಂಜಾರಾ, ಕೊರಚ, ಕೊರಮ, ಬೋವಿ ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ- ಪಿ.ರಾಜೀವ್

Share This Article