ರಾಯ್‍ಪುರ್: ಛತ್ತೀಸ್‍ಗಢದ (Chhattisgarh) ದಾಂತೇವಾಡದಲ್ಲಿ ಭದ್ರತಾ ಪಡೆಗಳು (Indian Army) ನಡೆಸಿದ ಎನ್‍ಕೌಂಟರ್‌ನಲ್ಲಿ (Encounter) ಕನಿಷ್ಠ ಒಂಬತ್ತು ನಕ್ಸಲರು ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ನಕ್ಸಲರು ಇರುವ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಬೆಳಗ್ಗೆ 10:30ರ ವೇಳೆಗೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ 9 ನಕ್ಸಲರ ಶವವನ್ನು ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಸೆಲ್ಫ್ ಲೋಡಿಂಗ್ ರೈಫಲ್ 303 ಮತ್ತು 12 ಬೋರ್ ಗನ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಯುತ್ತಿದೆ. ಎನ್‍ಕೌಂಟರ್‌ನಲ್ಲಿ ಇದುವರೆಗೆ ಯಾವುದೇ ಭದ್ರತಾ ಸಿಬ್ಬಂದಿ ಗಾಯಗೊಂಡಿಲ್ಲ.
ಕಳೆದ ವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಮೇಲೆ ಪ್ರತ್ಯೇಕ ಘಟನೆಗಳಲ್ಲಿ ಮೂವರು ಗ್ರಾಮಸ್ಥರನ್ನು ನಕ್ಸಲೀಯರು ಕೊಂದಿದ್ದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‍ಗಢಕ್ಕೆ ಭೇಟಿ ನೀಡಿದ್ದರು. ಅಲ್ಲಿ ನಕ್ಸಲ್ ವಿರೋಧಿ ಕಾರ್ಯತಂತ್ರಗಳ ಕುರಿತು ಏಳು ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಿದ್ದರು.