Chamarajanagar
ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನ
ಚಾಮರಾಜನಗರ: ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನವಾಗಿರುವ ದಾರುಣ ಘಟನೆ ಚಾಮರಾಜನಗರದ ಮಹದೇಶ್ವರ ಬೆಟ್ಟದ ಆಳಂಬಾಡಿ ಗ್ರಾಮದಲ್ಲಿ ನಡೆದಿದೆ.
ಆಳಂಬಾಡಿ ಗ್ರಾಮದ ಸುರೇಶ್ ಹಾಗೂ ಮುತ್ತುಲಕ್ಷ್ಮೀ ದಂಪತಿಯ ಮಗುವೇ ಬೆಂಕಿಗಾಹುತಿಯಾಗಿರುವ ಮೃತ ದುರ್ದೈವಿ. ದಂಪತಿಗೆ ಅರಣ್ಯ ಇಲಾಖೆಯು ಸಾಗುವಳಿ ಜಮಿನನ್ನು ನೀಡಿತ್ತು. ಆದ್ದರಿಂದ ದಂಪತಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ರು. ಇಲ್ಲಿ ನಿತ್ಯ ಆನೆಗಳು ದಾಳಿ ಮಾಡುತ್ತಿದ್ದು, ಅದನ್ನು ತಪ್ಪಿಸಲು ಬೆಂಕಿ ಹಾಕುತ್ತಿದ್ದರು.
ಮಂಗಳವಾರ ರಾತ್ರಿ ಕೂಡ ಬೆಂಕಿ ಹಾಕಲಾಗಿತ್ತು. ಬುಧವಾರ ಮಗುವಿನ ತಾಯಿ ಮಗುವನ್ನು ಗುಡಿಸಲಿನಲ್ಲಿ ಮಲಗಿಸಿ ನೀರನ್ನು ತರಲು ತೆರಳಿದ್ದ ವೇಳೆ ಬೆಂಕಿ ಕಿಡಿಯೊಂದು ಗುಡಿಸಲಿಗೆ ತಗುಲಿ ಗುಡಿಸಲು ಸಂಪೂರ್ಣ ಭಸ್ಮವಾಗಿದ್ದು ಮಲಗಿದ್ದ 9 ತಂಗಳ ಮಗು ಮೃತಪಟ್ಟಿದೆ.
ಮೃತ ಮಗುವಿನ ತಂದೆಯ ದೂರಿನನ್ವಯ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
