ರಾಯ್ಪುರ್: ಛತ್ತೀಸ್‌ಗಢದ (Chhattisgarh) ಧಮ್ತಾರಿ ಜಿಲ್ಲೆಯಲ್ಲಿ 9 ನಕ್ಸಲರು (Maoists) ಪೊಲೀಸರಿಗೆ (Police) ಶರಣಾಗಿದ್ದಾರೆ. ಎಲ್ಲರ ತಲೆಗೂ ಸೇರಿ ಸುಮಾರು 47 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದ ನಕ್ಸಲರಲ್ಲಿ ಏಳು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಇವರು ಒಡಿಶಾ ಮಾವೋವಾದಿಗಳ ಸಮಿತಿಯ ಧಮ್ತಾರಿ-ಗರಿಯಾಬಂದ್-ನುವಾಪಾಡಾ ವಿಭಾಗದ ನಾಗ್ರಿ, ಸಿತಾನದಿ ಪ್ರದೇಶ ಸಮಿತಿ ಮತ್ತು ಮೈನ್‌ಪುರ ಸ್ಥಳೀಯ ಗೆರಿಲ್ಲಾ ಸ್ಕ್ವಾಡ್‌ಗೆ ಸೇರಿದವರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅಮರೇಶ್ ಮಿಶ್ರಾ ಹೇಳಿದ್ದಾರೆ.
ಮಾವೋವಾದಿ ಸಿದ್ಧಾಂತ ಮತ್ತು ಅರಣ್ಯ ಜೀವನದ ಕಷ್ಟಗಳಿಂದ ಅವರೆಲ್ಲ ನಿರಾಶೆಗೊಂಡಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಅವರೆಲ್ಲ ಪ್ರಭಾವಿತರಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ತಲೆಗೆ 1 ಕೋಟಿ ಬಹುಮಾನ ಹೊಂದಿದ್ದ ಮಾವೋವಾದಿ ಸೇರಿ 15 ನಕ್ಸಲರ ಹತ್ಯೆ

ಶರಣಾದವರ ವಿವರ: ಸೀತಾನದಿ ಪ್ರದೇಶ ಸಮಿತಿಯ ಕಾರ್ಯದರ್ಶಿ ಜ್ಯೋತಿ ಅಲಿಯಾಸ್ ಜೈನಿ (28) ಮತ್ತು ವಿಭಾಗೀಯ ಸಮಿತಿ ಸದಸ್ಯೆ ಉಷಾ ಅಲಿಯಾಸ್ ಬಾಲಮ್ಮ (45) ಇವರಿಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ರಾಮದಾಸ್ ಮಾರ್ಕಮ್ (30), ರೋನಿ ಅಲಿಯಾಸ್ ಉಮಾ (25), ನಿರಂಜನ್ ಅಲಿಯಾಸ್ ಪೋಡಿಯಾ (25), ಸಿಂಧು ಅಲಿಯಾಸ್ ಸೋಮಾಡಿ (25), ರೀನಾ ಅಲಿಯಾಸ್ ಚಿರೋ (25), ಮತ್ತು ಅಮಿಲಾ ಅಲಿಯಾಸ್ ಸನ್ನಿ (25) ಇವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಬಾಲಮ್ಮ ತೆಲಂಗಾಣ ಮೂಲದವಳು, ಇತರರು ಛತ್ತೀಸ್‌ಗಢದ ವಿವಿಧ ಜಿಲ್ಲೆಯವರಾಗಿದ್ದಾರೆ.
ರಾಯ್‌ಪುರ ಪೊಲೀಸ್ ವ್ಯಾಪ್ತಿಯ ಧಮ್ತಾರಿ ಮತ್ತು ಗರಿಯಾಬಂದ್ ಜಿಲ್ಲೆಗಳಲ್ಲಿ ಹಾಗೂ ಒಡಿಶಾದ ಪಕ್ಕದ ನುವಾಪಾ ಜಿಲ್ಲೆಯಲ್ಲಿ ಪಟ್ಟಿ ಮಾಡಲಾಗಿದ್ದ ಎಲ್ಲಾ ಸಕ್ರಿಯ ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ. ಕೆಲವರು ಶರಣಾಗಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಮಾವೋವಾದಿಗಳು ಸಕ್ರಿಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಇನ್ಸಾಸ್ ರೈಫಲ್‌ಗಳು, ಎರಡು ಸಿಂಗಲ್ ಲೋಡಿಂಗ್ ರೈಫಲ್‌ಗಳು (SLR), ಒಂದು ಕಾರ್ಬೈನ್ ಮತ್ತು ಒಂದು ಮಜಲ್-ಲೋಡಿಂಗ್ ಗನ್‌ಗಳನ್ನು ಶರಣಾದ ನಕ್ಸಲರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರೊಂದಿಗೆ, ಈ ವರ್ಷ ಇಲ್ಲಿಯವರೆಗೆ ರಾಜ್ಯದಲ್ಲಿ 189 ಮಾವೋವಾದಿಗಳು ಶರಣಾಗಿದ್ದಾರೆ.
2025 ರಲ್ಲಿ ರಾಜ್ಯದಲ್ಲಿ 1,500 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದರು. ಮಾರ್ಚ್ 31 ರೊಳಗೆ ದೇಶದಿಂದ ಮಾವೋವಾದವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಘೋಷಿಸಿದೆ. ಇದನ್ನೂ ಓದಿ: ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿಗೆ

