Latest
ಕಂಟೇನರ್ ಡಿಕ್ಕಿಗೆ ಅಪ್ಪಚ್ಚಿ ಆಯ್ತು ಟಿಟಿ – ಸ್ಥಳದಲ್ಲೇ 9 ಸಾವು, 6 ಮಂದಿ ಗಂಭೀರ

ಚೆನ್ನೈ: ಟೆಂಪೋ ಟ್ರಾವೆಲ್ಲರ್ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಸುಮಾರು 11 ಗಂಟೆಗೆ ತಿರುಚ್ಚಿ ಮತ್ತು ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು, ನಾಲ್ವರು ಪುರುಷರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರು ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರಾಗಿದ್ದು, ಇವರು ಒಟ್ಟಾಗಿ ತಿರುಪತಿಯ ವೆಂಕಟೇಶ್ವರ ದರ್ಶನಕ್ಕೆ ಟಿಟಿಯಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ತಿರುಚ್ಚಿ ಸಮೀಪದ ತುವರಂಕುರಿಚ್ಚಿಯಲ್ಲಿರುವ ರಾಷ್ಟ್ರಿಯ ಹೆದ್ದಾರಿಯಲ್ಲಿ ಟಿಟಿಗೆ ಕಂಟೇನರ್ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ಬಂದು ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಟಿಟಿ ಚಾಲಕನನ್ನು ತಿರುಚಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಚಾಲಕ ವೇಗವಾಗಿ ಟಿಟಿಯನ್ನು ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
