ಮಂಡ್ಯ: ಟೀಚರ್ ಆಗಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿನಿ ತನ್ನ ಸಾವಿಗೆ ಟೀಚರ್ ಕಾರಣವೆಂದು ಎಡಗೈಯಲ್ಲಿ ಬರೆದುಕೊಂಡು ನೇಣಿಗೆ ಶರಣಾದ ಘಟನೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
13 ವರ್ಷದ ಭವಾನಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಭವಾನಿ ಸಾರೆನೇಗಿಲುಕೊಪ್ಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಈಕೆ ಸಾಯುವ ಮುನ್ನ ಎಡಗೈ ಹಸ್ತದ ಮೇಲೆ ತನ್ನ ಸಾವಿಗೆ ಪ್ರಾಥಮಿಕ ಶಾಲೆಯ ಯಶೋಧಮ್ಮ ಟೀಚರ್ ಕಾರಣ ಅಂತಾ ಬರೆದುಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಭವಾನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ತಾಯಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಯಶೋಧ ಟೀಚರ್ ಚೆನ್ನಾಗಿ ಪಾಠ ಮಾಡ್ತಿದ್ರು. ಒಮ್ಮೊಮ್ಮೆ ಬೈತಾಯಿದ್ರು. ಭವಾನಿ ಮುಂದೆ ಟೀಚರ್ ಆಗುವ ಕನಸು ಕಂಡಿದ್ದಳು. ಬೇರೇನೂ ನಮಗೆ ಗೊತ್ತಿಲ್ಲ ಎಂದು ಭವಾನಿ ತಾಯಿ ನಾಗಮ್ಮ ಹೇಳಿದ್ದಾರೆ.
ಯಶೋಧ ಟೀಚರ್ ಕೆಟ್ಟದಾಗಿ ಕಳ್ಳಿ, ಸುಳ್ಳಿ ಎಂದೆಲ್ಲ ನಿಂದಿಸುತ್ತಿದ್ರು. ಹೀಗಾಗಿ ನನ್ನ ಗೆಳತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಭವಾನಿಯ ಗೆಳತಿ ಹೇಳಿದ್ದಾಳೆ.
ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.