ಬೆಂಗಳೂರು: ಕಾದವನು ಮೇಧಾವಿ ನುಗ್ಗಿದವನು ಮೂರ್ಖ…! ಕಾಯೋಣ ಅಂತಾ ಖಡಕ್ ಡೈಲಾಗ್ ಹೊಡೆದು ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾ 8ಎಂಎಂ. ಹೆಚ್ಚಾಗಿ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಜಗ್ಗೇಶ್ ಹಿಂದೆಂದೂ ಕಾಣದಂತಹ ವಿಭಿನ್ನ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನವೆಂಬರ್ ನಲ್ಲಿ ಬಿಡುಗಡೆಯಾದ ಈ ಚಿತ್ರ ಇದೇ ಭಾನುವಾರ ಅಂದ್ರೆ ಮಾರ್ಚ್ 24 ಮಧ್ಯಾಹ್ನ 3:00 ಗಂಟೆಗೆ ನಿಮ್ಮ ನೆಚ್ಚಿನ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ
ಅಧಿಕಾರಶಾಹಿ ವ್ಯವಸ್ಥೆ, ವಯಸ್ಸಾದವರ ಅಸಹಾಯಕತೆ, ಸರಣಿ ಕೊಲೆಗಳ ಸುತ್ತ ಸಾಗುವ ಸಿನಿಮಾಗೆ ಪ್ರೇಕ್ಷಕರು ಜೈಕಾರ ಹಾಕಿದ್ದರು. ಗನ್ನು ಕದ್ದವನು, ಸರಣಿ ಕೊಲೆಗಾರ, ಪೊಲೀಸ್ ಅಧಿಕಾರಿ, ಒಬ್ಬ ಪತ್ರಕರ್ತೆ ಇವರ ಸುತ್ತ ಕಥೆ ಸಾಗುತ್ತಾ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು.
ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ 8ಎಂಎಂ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಇದ್ದವು. ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ನೆಗೆಟಿವ್ ಶೇಡಲ್ಲಿ ಕಾಣಿಸಿಕೊಂಡ್ರೆ, ತನ್ನ ಕಂಠದ ಮೂಲಕವೇ ಮನೆಮಾತಾಗಿರುವ ವಸಿಷ್ಠ ಸಿಂಹ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಮಯೂರಿ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರವನ್ನು ನಿಭಾಯಿಸಿದ್ದು ಆದಿ ಲೋಕೇಶ್, ರಾಕ್ ಲೈನ್ ವೆಂಕಟೇಶ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ವಿಶೇಷತೆಯನ್ನು ಹೆಚ್ಚಿಸಿತ್ತು.