ಮುಂಬೈ: 87 ವರ್ಷದ ಇತಿಹಾಸ ಹೊಂದಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಈ ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರದ್ದು ಮಾಡಿದೆ.
ವಿವಿಧ ರಾಜ್ಯಗಳ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಬಿಸಿಸಿಐ ರಣಜಿ ಕ್ರಿಕೆಟ್ ರದ್ದು ಮಾಡಿ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ ನಡೆಸಲು ಮುಂದಾಗಿದೆ.
ಮಹಿಳೆಯರ 50 ಓವರ್‌ಗಳ ಕ್ರಿಕೆಟ್ ಪಂದ್ಯ ಮತ್ತು 19 ವರ್ಷದ ಒಳಗಿನವರಿಗಾಗಿ ಒಂದು ದಿನದ ಟೂರ್ನಿ ಆಯೋಜಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಾಜ್ಯಗಳ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ದೀರ್ಘ ಸಮಯದ ಕಾಲ ಬಯೋ ಬಬಲ್‌ನಲ್ಲಿ ಟೂರ್ನಿ ಆಡಿಸುವುದು ಬಹಳ ಕಷ್ಟ ಎಂಬ ಅಭಿಪ್ರಾಯಕ್ಕೆ ಬಂದ ಹಿನ್ನೆಲೆಯಲ್ಲಿ ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಟೂರ್ನಿ ನಡೆಸುವುದು ಬಹಳ ಕಷ್ಟ ಎಂಬ ವಿಚಾರ ನಿಮಗೂ ತಿಳಿದಿದೆ. ಈ ನಿಟ್ಟಿನಲ್ಲಿ ದೇಶೀಯ ಕ್ರಿಕೆಟ್ ವೇಳಾಪಟ್ಟಿ ತಯಾರಿಸುವುದು ಬಹಳ ಕಷ್ಟ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಬೇಕಿದೆ ಎಂದು ಜಯ್ ಶಾ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ರಣಜಿ ಕ್ರಿಕೆಟ್ ಸೇರಿದಂತೆ ಹಲವು ಕ್ರಿಕೆಟ್ ಟೂರ್ನಿಗಳನ್ನು ಬಿಸಿಸಿಐ ರದ್ದುಗೊಳಿಸಿತ್ತು.