– ಕರ್ನಾಟಕಕ್ಕೆ ಕಾಡುತ್ತಿದೆ ಸೈಬರ್ ಭೂತ
ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ವಹಿವಾಟು ಹೆಚ್ಚಾಗುತ್ತಲೇ ಇದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ವಂಚಕರು ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಕನ್ನ ಇಡಲು ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್ ಅಪರಾಧ ಸೂಚ್ಯಂಕದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ ಎಂಬುದನ್ನು ತೋರಿಸಿದೆ. ಸೈಬರ್ ಅಪರಾಧದ ಮೂಲ ಹಾಗೂ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸೈಬರ್ ಅಪರಾಧಗಳು ಘಟಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಆಕ್ಸ್‌ಫರ್ಡ್ ವಿವಿ, ನ್ಯೂ ಸೌತ್ ವೇಲ್ಸ್ ವಿವಿ, ಮೊನಾಶ್ ವಿವಿ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಸೈನ್ಸ್ ಪೊ ನಡೆಸಿದ ಅಧ್ಯಯನ ಇದಾಗಿದೆ. ಇದೀಗ ಡಿಜಿಟಲ್ ಅರೆಸ್ಟ್, ಇತರ ಸೈಬರ್ ವಂಚನೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣವೂ ಇದೆ.
ಇದೀಗ ಕರ್ನಾಟಕಕ್ಕೂ ಈ ಸೈಬರ್ ಭೂತ ಕಾಡುತ್ತಿದೆ. ಈ ವರ್ಷ ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು ಸೈಬರ್ ಅಪರಾಧಗಳಲ್ಲಿ ವಂಚಕರು ಸುಮಾರು 861 ಕೋಟಿಯಷ್ಟು ಹಣ ದೋಚಿದ್ದಾರೆಂದು ತಿಳಿದುಬಂದಿದೆ. ಬೆರಳೆಣಿಕೆಯ ಪ್ರಕರಣಗಳಿಗಷ್ಟೇ ಪರಿಹಾರ ಸಿಕ್ಕರೂ ಉಳಿದ ಪ್ರಕರಣಗಳ ಸುಳಿವು ಪತ್ತೆಯಾಗದಂತಾಗಿದೆ.
ಕಳೆದ ವರ್ಷ ಡಿಜಿಟಲ್ ಅರೆಸ್ಟ್ ಮತ್ತು ಇತರ ಸೈಬರ್ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ತಮ್ಮ ʻಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಗಂಭೀರ ಎಂಬುದನ್ನು ಸೂಚಿಸಿತ್ತು. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದರು. ಆದಾಗ್ಯೂ ಕೆಲ ಜನರು ದುಪ್ಪಟ್ಟು ಹಣದ ಆಸೆಗೆ, ಇನ್ನೂ ಕೆಲವರು ಕಾಮಪ್ರಚೋದನೆಗೆ ಸಿಲುಕಿ ಸೈಬರ್ ಅಪರಾಧಗಳಿಗೆ ಒಳಗಾಗುತ್ತಿದ್ದಾರೆ. ಯಾವ ಯಾವ ರೀತಿ ಸೈಬರ್ ಅಪರಾಧಗಳಿಗೆ ಒಳಗಾಗ್ತಿದ್ದಾರೆ? ನೀವು ಹೇಗೆಲ್ಲಾ ಮೋಸ ಹೋಗ್ತಿದ್ದೀರಿ? ವಂಚಕರು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಕೈಹಾಕಲು ನೀವೆ ದಾರಿ ಮಾಡಿಕೊಡ್ತಿರೋದು ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಿದ್ದರೆ ಮುಂದೆ ಓದಿ..
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.
ನಾವು ವಂಚನೆಗೆ ಒಳಗಾಗ್ತಿರೋದು ಹೇಗೆ?
ಹೆಚ್ಚಾಗಿ ಈ ಸೈಬರ್ ವಂಚನೆಗೆ ಬಲಿಯಾಗಿರೋದು ವಿದ್ಯಾರ್ಥಿಗಳು, ಪಿಂಚಣಿದಾರರು, ಅನುಭವಿ ವೃತ್ತಿಪರರು. ಗಿಫ್ಟ್ ಹೆಸರಿನಲ್ಲಿ ಬರುವ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು, ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಹಂಚಿಕೊಳ್ಳುವುದು, ಬ್ಲ್ಯಾಕ್‌ಮೇಲ್‌ಗೆ ಒಳಗಾಗುವುದು ಹಾಗೂ ಡೇಟಿಂಗ್ ಆಪ್‌ಗಳಲ್ಲಿ ಹುಡುಗಿಯರ ಮೋಹಕ್ಕೆ ಸಿಕ್ಕಿ ಬಳಿಕ ಬೆದರಿಕೆಗೆ ಒಳಗಾಗುವುದು. ಕೆಲವರು ಎಟಿಎಂ ಪಡೆದು ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುವುದು. ವಿದ್ಯಾವಂತರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ದುಪ್ಪಟ್ಟು ಹಣ ಮಾಡುವ ಆಮಿಷ ಒಡ್ಡುವುದು. ಈ ರೀತಿಯ ಕೃತ್ಯಗಳಿಂದಲೇ ಹೆಚ್ಚಾಗಿ ಹಣ ಕಳೆದುಕೊಂಡಿರುವುದಾಗಿ ಸೈಬರ್ ತಜ್ಞರು ಹೇಳಿದ್ದಾರೆ.
ಸೈಬರ್ ತನಿಖಾಧಿಕಾರಿಗಳು ಹೇಳುವಂತೆ ಅಪರಾಧ ನಡೆದ 24 ಗಂಟೆಯಲ್ಲಿ ವರದಿ ಮಾಡಿದ್ರೆ, ಬ್ಯಾಂಕ್‌ಗಳನ್ನ ಅಲರ್ಟ್ ಮಾಡಬಹುದು, ಅಪರಾಧಿಯ ಪತ್ತೆಗೆ ಪ್ರಯತ್ನಿಸಬಹುದು. ಆದ್ರೆ ಕೆಲವರು ಭಯದಿಂದ, ಇನ್ನು ಕೆಲವರು ಮರ್ಯಾದೆಗೆ ಅಂಜಿ ಪ್ರಕರಣವನ್ನು ಹೇಳಿಕೊಳ್ಳದೇ ಮುಚ್ಚಿಡುತ್ತಿದ್ದಾರೆ. ಕೆಲವರು 2-3 ದಿನ ಕಳೆದು ವರದಿ ಮಾಡುವ ಹೊತ್ತಿಗೆ ಹಣವೆಲ್ಲ ಡಜನ್‌ಗಟ್ಟಲೇ ಖಾತೆಗಳಿಗೆ ಹಂಚಿಹೋಗಿರುತ್ತದೆ. ಬಳಿಕ ಸೈಬರ್ ವಂಚಕರು ಅದನ್ನು ಕ್ರಿಪ್ಟೋ ಕರೆನ್ಸಿ ಆಗಿ ಬದಲಾಯಿಸಿಕೊಂಡು ಕಣ್ಮರೆಯಾಗ್ತಿದ್ದಾರೆ. ಹೀಗಾಗಿ ವಂಚಕರನ್ನ ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ ಎನ್ನುತ್ತಾರೆ ಸೈಬರ್ ತಜ್ಞರು.
ಯಾವ ರೀತಿ ವಂಚನೆ ನಡೆಯುತ್ತೆ?
* ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯಿಸಿಕೊಂಡು ಭಾವನಾತ್ಮಕವಾಗಿ ಕಟ್ಟಿಹಾಕಿ, ವೈದ್ಯಕೀಯ ಚಿಕಿತ್ಸೆ ಮತ್ತಿತರ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆದು ವಂಚಿಸುತ್ತಾರೆ.
* ದೊಡ್ಡ ದೊಡ್ಡ ಸ್ಯಾಲರಿ ಆಫರ್‌ಗಳನ್ನು ತೋರಿಸಿ ಉದ್ಯೋಗ ಒದಗಿಸುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಾರೆ.
* ತಂತ್ರಜ್ಞಾನ ಕುರಿತ ಬಳಕೆದಾರರ ಸೀಮಿತ ಜ್ಞಾನವನ್ನೇ ಬಂಡವಾಳವಾಗಿ ಮಾಡಿಕೊಂಡು, ಸಂತ್ರಸ್ತರ ಕಂಪ್ಯೂಟರ್‌ನ ಪಾಸ್‌ವರ್ಡ್ ಪಡೆದು ವೈಯಕ್ತಿಕ ಮತ್ತು ಗೌಪ್ಯ ಮಾಹಿತಿ ಕದಿಯುತ್ತಾರೆ.
* ನಕಲಿ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣ ಖಾತೆ ತೆರೆದು ವಿಪತ್ತು ಪರಿಹಾರ, ಆರೋಗ್ಯ ನಿಧಿಗೆ ಸಂಬಂಧಿಸಿದ ಕಾರ್ಯಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡುತ್ತಾರೆ.
* ಕೆಲ ವಂಚಕರು ಇ-ಮೇಲ್ ಅಥವಾ ಜಾಲತಾಣಗಳ ಮೂಲಕ ಸಂಪರ್ಕಿಸಿ, ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಕೂಡಲೇ ಹಣ ವರ್ಗಾಯಿಸಿ ಎಂದು ಕೇಳುತ್ತಾರೆ.
* ನಕಲಿ ಆನ್‌ಲೈನ್ ಸ್ಟೋರ್ ಸೃಷ್ಟಿಸಿ ʻಕ್ಯಾಶ್ ಆನ್ ಡೆಲಿವರಿ’ ಅಯ್ಕೆ ನೀಡುತ್ತಾರೆ. ಆದರೆ ವಿಳಾಸಕ್ಕೆ ತಲುಪಿದ ವಸ್ತುವು ನಕಲಿಯಾಗಿರುತ್ತದೆ ಅಥವಾ ಆರ್ಡರ್ ಮಾಡಿದ್ದಕ್ಕಿಂತ ಕಳಪೆಯಾಗಿರುತ್ತದೆ.
* ಟೆಲಿಕಾಂ ನಿಯಂತ್ರಣ ಸಂಸ್ಥೆ ಹೆಸರಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ, ʻಸೇವೆಯಲ್ಲಿ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಗುರುತು ಪರಿಶೀಲನೆಗಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮತ್ತು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಿ’ ಎಂದು ಕೇಳುತ್ತಾರೆ. ಹೀಗೆ ಅನೇಕ ರೀತಿಯಲ್ಲಿ ಡಿಜಿಟಲ್ ವಂಚಕರು ಹಣ ಪೀಕುತ್ತಿದ್ದಾರೆ.
ಹೆಚ್ಚುತ್ತಲೇ ಇದೆ ಪ್ರಕರಣಗಳ ಸಂಖ್ಯೆ
2024ರಲ್ಲಿ ವರ್ಷಾಂತ್ಯದವರೆಗೆ ಸೈಬರ್ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ 8,620 ಪ್ರಕರಣ ದಾಖಲಾಗಿತ್ತು. ಈ ಪೈಕಿ ಕೇವಲ 399 ಪ್ರಕರಣಕ್ಕೆ ಮಾತ್ರವೇ ಪರಿಹಾರ ಸಿಕ್ಕಿದ್ದವು. ಇನ್ನೂ 2023ರಲ್ಲಿ 22,000 ಪ್ರಕರಣಗಳು ಸೇರಿ 2023ರಿಂದ ಈವರೆಗೆ ಒಟ್ಟು 53 ಸಾವಿರ ಪ್ರಕರಣಗಳು ವರದಿಯಾಗಿದೆ. ಆದ್ರೆ ಈ ವರ್ಷ 7 ತಿಂಗಳಲ್ಲೇ 8,620 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರು ಒಂದರಲ್ಲೇ 6,311 ಕೇಸ್‌ಗಳು ದಾಖಲಾಗಿವೆ. ಜೊತೆಗೆ ಬೆಂಗಳೂರು ಗ್ರಾಮಾಂತರದಲ್ಲಿ 258, ವಿಜಯಪುರದಲ್ಲಿ 250, ತುಮಕೂರಿನಲ್ಲಿ 151 ಪ್ರಕರಣಗಳು, ಉಡುಪಿಯಲ್ಲಿ 100ಕ್ಕೂ ಹೆಚ್ಚು ಹಾಗೂ ಮೈಸೂರಿನಲ್ಲಿ 7 ತಿಂಗಳಲ್ಲಿ 98 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇತ್ತೀಚೆಗೆ ಬೆಂಗಳೂರಿನ ಸುಮಾರು 90 ಮೊಬೈಲ್ ಸರ್ವಿಸ್ ಮಳಿಗೆಗಳು ಸುಳ್ಳು ಗುರುತಿನ ಚೀಟಿಗಳಿಗೆ ಸಿಮ್ ಕಾರ್ಡ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ನಕಲಿ ದಾಖಲೆಯಲ್ಲಿ ಸಿಮ್ ಖರೀದಿಸಿದ ವಂಚಕರು ಕೃತ್ಯದ ಬಳಿಕ ಸಿಮ್, ಕೃತ್ಯಕ್ಕೆ ಬಳಸಿದ ಮೊಬೈಲ್ ಬಿಸಾಡಿ ಎಸ್ಕೇಪ್ ಆಗ್ತಿದ್ದಾರೆ.
ಕರ್ನಾಟಕ ಸೈಬರ್ ಫಾರೆನ್ಸಿಕ್ ವಿಭಾಗವು ಈ ಕೃತ್ಯಗಳಿಗೆ ಕಡಿವಾಣ ಹಾಕಲೆಂದೇ ಇತ್ತೀಚೆಗೆ 43 ಸೈಬರ್ ಅಪರಾಧ ಪೊಲೀಸ್ ಠಾಣೆಗಳನ್ನು ತೆರೆದಿದೆ. ಅಧಿಕಾರಿಗಳಿಗೆ ಮಾಲ್‌ವೇರ್ ವಿಶ್ಲೇಷಣೆ ಮತ್ತು ಡಿಜಿಟಲ್ ಫೋರೆನ್ಸಿಕ್ಸ್‌ನಲ್ಲಿ ತರಬೇತಿ ನೀಡಲಾಗಿದೆ. ಆದಾಗ್ಯೂ ಕಳ್ಳರಯ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಆದ್ರೆ ಪೂರಕ ಸಾಕ್ಷ್ಯಗಳು ಸಿಗದೇ ಇದ್ದ ಕಾರಣ ಕೆಲವೊಂದು ಪ್ರಕರಣಗಳಲ್ಲಿ ಆರೋಪಿ ಸಿಕ್ಕರೂ ಶಿಕ್ಷೆಗೆ ಒಳಪಡಿಸುವುದು ಕಷ್ಟವಾಗುತ್ತಿದೆ.
ಪ್ರಧಾನಿ ತಲುಪಿದ ʻಪಬ್ಲಿಕ್ ಟಿವಿʼ ವರದಿ
ವಿಜಯಪುರ ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮಾತನಾಡಿದ್ದರು. ಪ್ರಧಾನಿ ಮೋದಿ ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತಿ ಮೂಡಿಸಿದ್ದರು. ವಿಜಯಪುರದ ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತಲ್ಲದೇ, ಪ್ರಧಾನಿ ಮೋದಿಯವರೆಗೂ ತಲುಪಿತ್ತು. ಇದೇ ಪ್ರಕರಣವನ್ನು ಪ್ರಧಾನಿ ಮೋದಿ ಇತ್ತೀಚೆಗೆ ಉಲ್ಲೇಖಿಸಿ ಮಾತನಾಡಿದರು. ಅಲ್ಲದೇ ಬೆಳಗ್ಗೆ 11 ಗಂಟೆಗೆ ಆರಂಭವಾದ ʻಮೋದಿ ಮನ್ ಕಿ ಬಾತ್ʼನಲ್ಲಿ ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
ಮೋಸ ಹೋಗದಿರಲು ಈ ಅಂಶ ಗಮನಿಸಬೇಕು
* ಕರೆ ಮಾಡಿ ಹಣ ಅಕ್ರಮ ವರ್ಗಾವಣೆ, ಡ್ರಗ್ ಕಳ್ಳಸಾಗಣೆಯಂತಹ ಆರೋಪ ಮಾಡಿದ ಸಂದರ್ಭದಲ್ಲಿ ಆತಂಕ ಗೊಳ್ಳಬೇಡಿ. ನಿಮ್ಮ ಭಯ ಮತ್ತು ಆತುರವನ್ನೇ ವಂಚಕರು ಬಂಡವಾಳವಾಗಿ ಮಾಡಿಕೊಳ್ಳುತ್ತಾರೆ.
* ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ
* ವಂಚಕರಿಗೆ ಪ್ರತಿಕ್ರಿಯಿಸುವ ಮುನ್ನ ತಾಳ್ಮೆಯಿಂದ ಯೋಚಿಸಿ. ಒತ್ತಡದಲ್ಲಿದ್ದಾಗ ಹಣ ವರ್ಗಾವಣೆ ಮಾಡಬೇಡಿ. ತನಿಖಾ ಸಂಸ್ಥೆಗಳು ತಕ್ಷಣ ಹಣ ವರ್ಗಾವಣೆ ಮಾಡುವಂತೆ ಎಂದಿಗೂ ಒತ್ತಡ ಹೇರುವುದಿಲ್ಲ. ಫೋನ್ ಅಥವಾ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಬಹುತೇಕ ಅದು ಆನ್‌ಲೈನ್ ವಂಚನೆಯೇ ಆಗಿರುತ್ತದೆ
* ಆನ್‌ಲೈನ್ ವಂಚನೆಯ ಅನುಮಾನ ಬಂದರೆ, ಸಂಬಂಧಿತ ಸಂಸ್ಥೆಗಳನ್ನು ಸಂಪರ್ಕಿಸಿ ಪರಿಶೀಲಿಸಿ ಎಚ್ಚರಿಕೆಯಿಂದ ಇರುವುದು ಆನ್‌ಲೈನ್ ವಂಚನೆಯಿಂದ ಪಾರಾಗುವ ಪ್ರಮುಖ ʻಅಸ್ತ್ರʼ.
 
					





 
		 
		 
		 
		 
		 
		 
		 
		 
		