ವಾಷಿಂಗ್ಟನ್: ಅಮೆರಿಕದಲ್ಲಿ 86 ವರ್ಷದ ಹಳೆಯ ಸೇತುವೆಯನ್ನು 5 ಸೆಕೆಂಡ್‍ನಲ್ಲಿ ಸ್ಫೋಟ ಮಾಡಲಾಗಿದ್ದು, ಸ್ಫೋಟಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
86 ವರ್ಷದ ಬಾರ್ಕಲೆ ಬ್ರಿಡ್ಜ್ 1932ನಲ್ಲಿ ಓಪನ್ ಆಗಿದ್ದು, ಅದನ್ನು ಟೋಲ್ ಬ್ರಿಡ್ಜ್ ರೀತಿ ಉಪಯೋಗಿಸುತ್ತಿದ್ದರು. ಬುಧವಾರ ಈ ಸೇತುವೆಯನ್ನು ಸ್ಫೋಟಕಗಳನ್ನು ಬಳಸಿ ಸೆಕೆಂಡ್ ನಲ್ಲಿ ಕೆಡವಲಾಗಿದೆ.
ಈ ಸೇತುವೆಯ ಸಮೀಪವೇ ಮತ್ತೊಂದು ಸೇತುವೆ ನಿರ್ಮಿಸಲಾಗಿದ್ದು, ಫೆಬ್ರವರಿಯಿಂದ ಆ ಸೇತುವೆಯನ್ನು ಬಳಸಲಾಗುತ್ತಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಸ್ಫೋಟಗೊಳ್ಳುವ ಸಂದರ್ಭದಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಸೇತುವೆಯಿಂದ 1,500 ಅಡಿ ದೂರದವರೆಗೂ ಎಲ್ಲರನ್ನೂ ಸ್ಥಳಾಂತರಿಸಲಾಗಿತ್ತು. ಇನ್ನೂ ಕೆಲವು ಮಂದಿ ಬ್ರಿಡ್ಜ್ ಸ್ಫೋಟವಾಗುವುದನ್ನು ಬೋಟ್ ಹಾಗೂ ಕಯಾಕ್ಸ್ ನಲ್ಲಿ ಕುಳಿತು ದೂರದಿಂದಲೇ ವೀಕ್ಷಿಸುತ್ತಿದ್ದರು.
ಹಳೆ ಸೇತುವೆಯನ್ನು ಸ್ಫೋಟಿಸುವ ಮುನ್ನ ಹೊಸ ಸೇತುವೆಯನ್ನು 2 ಗಂಟೆಗಳ ಕಾಲ ಕ್ಲೋಸ್ ಮಾಡಲಾಗಿತ್ತು. ಬ್ರಿಡ್ಜ್ ಸ್ಫೋಟಗೊಂಡ ನಂತರ ನದಿಯನ್ನು ಸ್ವಚ್ಛಗೊಳಿಸಲು 24 ಗಂಟೆ ತೆಗೆದುಕೊಳ್ಳಲಾಯಿತು ಎಂದು ವರದಿಯಾಗಿದೆ.