ಮುಂಬೈ: 85 ವರ್ಷದ ವೃದ್ಧನೊಬ್ಬ ಡಿಜಿಟಲ್ ಅರೆಸ್ಟ್ (Digital Arrest) ಎಂಬ ಸೈಬರ್ ವಂಚನೆ ಜಾಲಕ್ಕೆ ಸಿಲುಕಿ ಬರೋಬ್ಬರಿ 9 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಮುಂಬೈನ ಠಾಕೂರ್ದ್ವಾರ ಪ್ರದೇಶದ ವೃದ್ಧನಿಗೆ, ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು ಸುಮಾರು 9 ಕೋಟಿ ರೂ. ವಂಚಿಸಲಾಗಿದೆ. ಭಯೋತ್ಪಾದನೆಗೆ ಹಣಕಾಸು ಒದಿಸಲಾಗಿದೆ ಎಂದು ವೃದ್ಧನಿಗೆ ಆರೋಪ ಹೊರಿಸಿ, ಹಣವನ್ನು ಹಲವು ಬ್ಯಾಂಕ್ ಖಾತೆಗಳಿಗೆ ವಂಚಕರು ವರ್ಗಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ರೊದ್ದಂ ಜ್ಯುವೆಲ್ಸ್ ಮೇಲೆ ಕೇರಳ ಎಸ್‌ಐಟಿ ದಾಳಿ
ವಂಚನೆಗೆ ಒಳಗಾದ ಸಂತ್ರಸ್ತ ವೃದ್ಧ ಠಾಕೂರ್ದ್ವಾರದಲ್ಲಿ ಹಿರಿಯ ಮಗಳೊಂದಿಗೆ ವಾಸವಾಗಿದ್ದಾರೆ. ಕಿರಿಯ ಪುತ್ರಿ ಅಮೆರಿಕದಲ್ಲಿ ನೆಲೆಸಿದ್ದಾರೆ. ನ.28 ರಂದು ವೃದ್ಧನಿಗೆ ಕರೆ ಬಂದಿತ್ತು. ಕರೆ ಮಾಡಿದಾತ ತನ್ನನ್ನು ನಾಸಿಕ್‌ನ ಪಂಚವಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಆಧಾರ್ ಕಾರ್ಡ್ ಬಳಸಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಖಾತೆಯನ್ನು ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಬಳಸಲಾಗಿದೆ. ಈ ಖಾತೆಯಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ನಿಷೇಧಿತ ಸಂಘಟನೆಗೆ ಹಣವನ್ನು ಕಳುಹಿಸಲಾಗಿದೆ ಎಂದು ಆರೋಪಿಗಳು ವೃದ್ಧನಿಗೆ ಸುಳ್ಳು ಹೇಳಿದ್ದಾರೆ.
ನಂತರ ವೃದ್ಧನಿಗೆ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿದ್ದ ಕರೆ ಮಾಡಿದ ವ್ಯಕ್ತಿ, ತನಿಖೆಗೆ ಸಹಕರಿಸಿದರೆ ನಿಜವಾದ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾನೆ. ‘ಡಿಜಿಟಲ್ ಇಂಡಿಯಾ’ ಉಪಕ್ರಮದಡಿಯಲ್ಲಿ ಇ-ತನಿಖೆ ನಡೆಸಲಾಗುತ್ತಿದೆ. ವಂಚಕರು ಪೊಲೀಸ್ ಠಾಣೆಗೆ ಬರುವ ಅಗತ್ಯವಿಲ್ಲ ಎಂದು ವಂಚಕರು ವೃದ್ಧನನ್ನು ನಂಬಿಸಿದ್ದಾರೆ. ಭಯ ಮತ್ತು ಮಾನಸಿಕ ಒತ್ತಡದಲ್ಲಿದ್ದ ವೃದ್ಧ ತನ್ನ ಎಲ್ಲಾ ಬ್ಯಾಂಕ್ ವಿವರಗಳು, ಖಾತೆಯ ಬಾಕಿಗಳು ಮತ್ತು ತನ್ನ ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ಹೂಡಿಕೆಗಳು, ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಂಚಕರ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ
ಡಿಸೆಂಬರ್ 1 ರಿಂದ ಡಿ.17ರ ನಡುವೆ ವಿವಿಧ ದಿನಾಂಕಗಳಲ್ಲಿ ಆರ್‌ಟಿಜಿಎಸ್ ಮೂಲಕ ಒಟ್ಟು 9 ಕೋಟಿ ರೂ. ಹಣವನ್ನು ವಿವಿಧ ಬ್ಯಾಂಕ್‌ಗಳ (ಐಸಿಐಸಿಐ, ಇಂಡಸ್‌ಇಂಡ್, ಆಕ್ಸಿಸ್, ಯೆಸ್ ಬ್ಯಾಂಕ್) ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಡಿ.22 ರಂದು ವೃದ್ಧನಿಂದ ವಂಚಕರು ಮತ್ತೆ 3 ಕೋಟಿ ರೂ. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಕೇಳಿದ್ದಾರೆ. ವೃದ್ಧ ಬ್ಯಾಂಕ್ ಆಫ್ ಇಂಡಿಯಾದ ಗಿರ್ಗಾಂವ್ ಶಾಖೆಗೆ ಹೋದಾಗ, ಬ್ಯಾಂಕ್ ನೌಕರರು ವಹಿವಾಟನ್ನು ನಿಲ್ಲಿಸಿ, ಅವರ ಸಂಬಂಧಿಕರಿಗೆ ಕರೆ ಮಾಡಿಸಿದ್ದಾರೆ. ಆಗ ಕುಟುಂಬಕ್ಕೆ ಇಡೀ ವಿಷಯದ ಬಗ್ಗೆ ಗೊತ್ತಾಗಿದೆ. ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

