ವಿಂಡ್ಹೋಕ್: ಕಾಡು ಪ್ರಾಣಿಗಳನ್ನು ಭಾರತದಲ್ಲಿ (India) ಕೊಲ್ಲಲು ನಿಷೇಧವಿದೆ. ಅದರೆ ನಮೀಬಿಯಾದಲ್ಲಿ (Namibia) ಸರ್ಕಾರವೇ ಕಾಡುಪ್ರಾಣಿಗಳನ್ನು (Wild Animals) ಕೊಲ್ಲಲು ಆದೇಶಿಸಿದೆ.
ಬರದಿಂದ (Drought) ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು (Elephants) ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಹೇಳಿದೆ.
ಪ್ರಾಣಿಗಳ ಸಂಖ್ಯೆಯು ಲಭ್ಯವಿರುವ ಹುಲ್ಲುಗಾವಲು ಭೂಮಿ ಮತ್ತು ನೀರಿನ ಸಂಪನ್ಮೂಲಗಳನ್ನು ಮೀರಿದೆ.ಇದರಿಂದಾಗಿ ಜನವಸತಿ ಇರುವ ಸ್ಥಳಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವರ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷವನ್ನು ನಿಯಂತ್ರಿಸಲು ಗುರುತಿಸಲಾದ ಪ್ರದೇಶಗಳಿಂದ 83 ಆನೆಗಳನ್ನು ಕೊಲ್ಲಲಾಗುತ್ತದೆ ಮತ್ತು ಮಾಂಸವನ್ನು ಬರ ಪರಿಹಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ನಮೀಬಿಯಾ ಪರಿಸರ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ವಿದೇಶಗಳಲ್ಲಿ ಬ್ರಿಟನ್‌ನ ದಾನಿಗಳ ವೀರ್ಯ ಬಳಕೆ ಏಕೆ ಕಳವಳಕಾರಿ?
ಆನೆಗಳ ಜೊತೆಗೆ, 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿ, 56,800 ಕೆಜಿ ಮಾಂಸವನ್ನು ಜನರಿಗೆ ನೀಡಲಾಗಿದೆ.
ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾಗರಿಕರ ಅನುಕೂಲಕ್ಕಾಗಿ ಬಳಸಲು ನಮಗೆ ಸಂವಿಧಾನದಲ್ಲಿ ಅನುಮತಿ ಇದೆ ಎಂದು ನಮೀಬಿಯಾ ಸರ್ಕಾರ ಕಾಡು ಪ್ರಾಣಿಗಳ ಭೇಟೆಯಾಡುವ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: 2014ರ ನಂತರ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ
ದಕ್ಷಿಣ ಆಫ್ರಿಕಾವು ಪ್ರಸ್ತುತ ದಶಕಗಳಲ್ಲಿ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ವಿಶ್ವಸಂಸ್ಥೆಯು ವರದಿ ಮಾಡಿದಂತೆ ಜುಲೈನಲ್ಲಿ ನಮೀಬಿಯಾ ಸಂಗ್ರಹಿಸಿಟ್ಟಿದ್ದ ಮೀಸಲು ಆಹಾರದಲ್ಲಿ 84% ರಷ್ಟು ಆಹಾರ ಖಾಲಿಯಾಗಿದೆ. ನಮೀಬಿಯಾದ ಜನಸಂಖ್ಯೆಯ ಅರ್ಧದಷ್ಟು ಜನರು ಮುಂಬರುವ ತಿಂಗಳುಗಳಲ್ಲಿ ಭಾರೀ ಆಹಾರದ ಸಮಸ್ಯೆ ಎದುರಿಸಬಹುದು. ಪರಿಸರ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸದಿದ್ದರೆ ಭೀಕರ ಬರಗಾಲವು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.
ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನಾ, ಅಂಗೋಲಾ ಮತ್ತು ನಮೀಬಿಯಾದಲ್ಲಿ ಅಂದಾಜು 2 ಲಕ್ಷ ಆನೆಗಳು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಆನೆಗಳು ಇಲ್ಲಿ ನೆಲೆಸಿವೆ. ಕಳೆದ ವರ್ಷ ಬೋಟ್ಸ್ವಾನಾ ಮತ್ತು ಜಿಂಬಾಬ್ವೆಯಲ್ಲಿ ನೂರಾರು ಆನೆಗಳು ಬರಗಾಲದಿಂದ ಸಾವನ್ನಪ್ಪಿದ್ದವು.