ಹಾಸನ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ 807 ಅತ್ಯಾಚಾರ ಆಗಿವೆ ಎಂದು ಮಾಜಿ ಸಚಿವ ಹಾಗೂ ಪರಿಷತ್ ಸದಸ್ಯ ಸಿ.ಟಿ.ರವಿ ಬೇಸರ ಹೊರಹಾಕಿದರು.
ಹಾಸನದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ತಂದೆ ಜೊತೆ ಮಗಳು ಹೋಗುವ ಹಾಗಿಲ್ಲ, ಅಣ್ಣ-ತಂಗಿ ಜೊತೆ ಹೋಗುವ ಹಾಗಿಲ್ಲ, ವಿದೇಶಿ ಪ್ರವಾಸಿಗರು ಬಂದರೆ ಅತ್ಯಾಚಾರ ಮಾಡ್ತಾರೆ. 1,500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, 1,530 ಕೊಲೆಯಾಗಿವೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರೂಪ. ಸರ್ಕಾರಿ ಅಧಿಕಾರಿ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜನರು ಸುಖವಾಗಿದ್ದಾರೆ ಅಂಥ ಭಾವಿಸಬೇಕಾ? ಹೆಂಗಸರಿಗೆ ಫ್ರೀ, ಗಂಡನ ಜೇಬಿಗೆ ಕತ್ತರಿ. ಪಿಕ್‌ಪ್ಯಾಕೆಟ್ ಅಂದರೆ ಗೊತ್ತಿಲ್ಲದೆ ಮಾಡ್ತಾರೆ ಅಂದುಕೊಳ್ಳಬಹುದು. ಸ್ಟಾಂಪ್ ಪೇಪರ್ ಬೆಲೆ ಎಷ್ಟು? ಇದಕ್ಕಿಂತ ಮನೆಹಾಳರು ಬೇಕು. ಕಸದ ಮೇಲೂ ಟ್ಯಾಕ್ಸ್, ಬರ್ತ್, ಡೆತ್‌ಸರ್ಟಿಫಿಕೇಟ್‌ಗೂ ಡಬಲ್. ಚಂಬಲ್ ಕಣಿವೆ ಡಕಾಯಿತರು ರಾತ್ರಿ ಬರುತ್ತಿದ್ದರು ಕಳ್ಳತನಕ್ಕೆ. ಆದರೆ, ಕಾಂಗ್ರೆಸ್‌ನವರು ಹಗಲು ವೇಳೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಸರ್ಕಾರಕ್ಕೆ ಇದೆಯಾ? ಇಡೀ ರಾಜ್ಯದಲ್ಲಿ ಜನಾಕ್ರೋಶ ಎದ್ದಿದೆ. ಮುಲ್ಲಾಗಳ ಕಣ್ಣಿಗೆ ಬೆಣ್ಣೆ, ಎಸ್ಸಿ-ಎಸ್ಟಿಗಳಿಗೆ ಸುಣ್ಣ. ಕಾಂಗ್ರೆಸ್ ಕೆಟ್ಟ ಸರ್ಕಾರ. ಅದನ್ನು ಕಿತ್ತು ಎಸೆಯುವವರೆಗೂ ಹೋರಾಟ ಮುಂದುವರೆಸಿ. ಕಾಂಗ್ರೆಸ್ ಸರ್ಕಾರ ಕಿತ್ತೆಸೆದು ಬಿಜೆಪಿ ಸರ್ಕಾರ ತನ್ನಿ ಎಂದು ಜನತೆಗೆ ಕರೆ ನೀಡಿದರು.
ಶಾಸಕ ಶ್ರೀರಾಮುಲು ಮಾತನಾಡಿ, 2028 ರಲ್ಲಿ ಪ್ರೀತಂಗೌಡ ಸೇರಿ ಏಳಕ್ಕೆ ಏಳು ಬಿಜೆಪಿ (ಹಾಸನದಲ್ಲಿ) ಗೆಲ್ಲಬೇಕು. ಕಾಂಗ್ರೆಸ್ ಸರ್ಕಾರ ಈ ರಾಜ್ಯದಿಂದ ತೊಲಗಬೇಕು. ಎಲ್ಲಾ ಮಂತ್ರಿಗಳು ಭಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾರು ಹೆಚ್ಚು ಹಣ ಕಲೆಕ್ಷನ್ ಮಾಡ್ತಾರೋ, ಅವರು ಐದು ವರ್ಷ ಸಚಿವರು. ಜನರೆಲ್ಲರೂ ಬಿಜೆಪಿ ಜೊತೆ ಬರಬೇಕಿದೆ. ಇದು 420, ಪಿಕ್‌ಪ್ಯಾಕೆಟ್ ಸರ್ಕಾರ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಣವನ್ನು ಬೇರೆ ಬೇರೆ ಕಡೆ ಉಪಯೋಗಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಗೆಲ್ಲಬೇಕು, ಕಮಲ ಅರಳಬೇಕು ಎಂದರು.