ನವದಹಲಿ: 14 ಬ್ಯಾಂಕ್‍ಗಳ ಒಕ್ಕೂಟಕ್ಕೆ ಒಟ್ಟಾರೆ 824 ಕೋಟಿ ರೂಪಾಯಿ ವಂಚನೆ ಮಾಡಿರೋ ಆರೋಪದ ಮೇಲೆ ಚೆನ್ನೈ ಮೂಲದ ಆಭರಣಕಾರ ಕನಿಷ್ಕ್ ಗೋಲ್ಡ್ ಪ್ರೈ.ಲಿ. ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಈ ಬಗ್ಗೆ ತನಿಖಾ ಸಂಸ್ಥೆಯ ಅಧಿಕಾರಿಗಳು ಬುಧವಾರದಂದು ಮಾಹಿತಿ ನೀಡಿದ್ದಾರೆ. ಈ ಒಕ್ಕೂಟವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದಲ್ಲಿದೆ.
ಒಕ್ಕೂಟದ ಪರವಾಗಿ ಎಸ್‍ಬಿಐ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಕನಿಷ್ಕ್ ಗೋಲ್ಡ್ ಕಂಪನಿಯ ನಿರ್ದೇಶಕರಾದ ಭೂಪೇಶ್ ಕುಮಾರ್ ಜೈನ್, ನೀತಾ ಜೈನ್, ತೇಜ್‍ರಾಜ್ ಅಚ್ಚ, ಅಜಯ್ ಕುಮಾರ್ ಜೈನ್, ಸುಮಿತ್ ಕೇಡಿಯ ಮತ್ತು ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿದೆ.
ಬುಧವಾರ ಸಿಬಿಐ ಅಧಿಕಾರಿಗಳು ಕನಿಷ್ಕ್ ಗೋಲ್ಡ್ ಕಂಪನಿಯ ಕೆಲ ಅಧಿಕಾರಿಗಳ ಮತ್ತು ಪ್ರವರ್ತಕರ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಂಪನಿಯು ಚಿನ್ನದ ಆಭರಣಗಳನ್ನ ತಯಾರು ಮಾಡುತ್ತಿದ್ದು, ‘ಕ್ರಿಜ್ಹ್’ ಎಂಬ ಬ್ರ್ಯಾಂಡ್ ಅಡಿಯಲ್ಲಿ 2014ರ ತನಕ ವಿತರಕರ ಮೂಲಕ ಮಾರಾಟವಾಗುತ್ತಿತ್ತು. 2015ರಲ್ಲಿ ತನ್ನ ವ್ಯವಹಾರದ ಮಾದರಿಯನ್ನು ಬದಲಿಸಿ ದೊಡ್ಡ ಚಿಲ್ಲರೆ ಆಭರಣಕಾರರಿಗೆ ಸರಬರಾಜು ಮಾಡಲು ಆರಂಭಿಸಿತು ಎಂದು ಎಸ್‍ಬಿಐ ದೂರಿನಲ್ಲಿ ಉಲ್ಲೇಖಿಸಿದೆ.
ಕಂಪನಿಯ ಸಾಲದ ಖಾತೆಗಳನ್ನು 2008ರಲ್ಲಿ ಐಸಿಐಸಿಐ ಬ್ಯಾಂಕ್‍ನಿಂದ ಎಸ್‍ಬಿಐಗೆ ವರ್ಗಾಯಿಸಲಾಗಿದ್ದು, 2011ರಲ್ಲಿ ಅದರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಹು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿವರ್ತಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಂಪನಿಯ ವಂಚನೆ 824.15 ಕೋಟಿ ರೂಪಾಯಿಯದ್ದಾಗಿದೆ. ಆದರೆ ಲಭ್ಯವಿರುವ ಭದ್ರತೆ ಕೇವಲ 156.65 ಕೋಟಿ ರೂ.ಗಳ ನಷ್ಟವನ್ನು ಮಾತ್ರ ಭರಿಸುತ್ತದೆ ಎಂದು ಎಸ್‍ಬಿಐ ಆರೋಪಿಸಿದೆ.
ಎಸ್‍ಬಿಐ ದೂರಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕಲೆಹಾಕಲು ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಸಂಸ್ಥೆಯು ಹುಡುಕಾಟ ನಡೆಸುವ ಮುಂಚೆಯೇ ಎಸ್‍ಬಿಐ ದೂರಿನ ಮಾಹಿತಿ ಬಹಿರಂಗವಾಗಿದ್ದು, ನಿರ್ಣಾಯಕ ಪುರಾವೆಗಳು ಸಿಗದೆ ಇರಬಹುದು ಎಂಬ ಕಳವಳವನ್ನು ಸಿಬಿಐ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕನಿಷ್ಕ್ ಗೋಲ್ಡ್ ಕಂಪನಿಯು ಸಾಲ ಪಡೆಯಲು 2009ರಿಂದ ಬ್ಯಾಂಕ್ ದಾಖಲೆಗಳನ್ನು ತನಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿಕೊಂಡು ಮೋಸ ಮಾಡಿದೆ. ಕಂಪನಿ ಮತ್ತು ಅದರ ನಿರ್ದೇಶಕರು ಬ್ಯಾಂಕಿನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಎಸ್‍ಬಿಐ ದೂರಿನಲ್ಲಿ ತಿಳಿಸಿದೆ.
2018ರ ಹಣಕಾಸು ವರ್ಷದಲ್ಲಿ ಕಂಪನಿಯ ಖಾತೆಯನ್ನು ವಂಚಕ ಮತ್ತು ಕಾರ್ಯನಿರ್ವಹಿಸದ ಸ್ವತ್ತು ಎಂದು ಘೋಷಿಸಲಾಗಿದೆ.