ಚೆನ್ನೈ: ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ 80 ವರ್ಷದ ವೃದ್ಧೆಯೊಬ್ಬರು ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತನ್ನ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ ಒಂದು ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ.
Advertisement
ವಡಿವೇಲಪಾಲ್ಯಂನಲ್ಲಿ ಕಳೆದ 30 ವರ್ಷಗಳಿಂದ ಅಜ್ಜಿ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ಮುಂಜಾನೆ ಇಡ್ಲಿ ತಯಾರಿಸಲು ತಾಜಾ ಹಿಟ್ಟನ್ನು ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಂಡು ಕೈಯಾರೆ ಅರೆಯುತ್ತಾರೆ. ಬಳಿಕ ತಾಜಾ ಇಡ್ಲಿ ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ. ಪ್ರತಿನಿತ್ಯ ಈ ಅಜ್ಜಿ ಬರೋಬ್ಬರಿ 1000 ಇಡ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಾರೆ.
Advertisement
Advertisement
ಈ ವ್ಯಾಪಾರ ಆರಂಭಿಸಿದಾಗ ಕೇವಲ 50 ಪೈಸೆಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದೆ. ಬಳಿಕ ಸಾಮಾಗ್ರಿಗಳ ಬೆಲೆ ಜಾಸ್ತಿಯಾದ ಬಳಿಕ ಒಂದು ರೂಪಾಯಿಗೆ ಇಡ್ಲಿ ಬೆಲೆಯನ್ನು ಏರಿಕೆ ಮಾಡಿದೆ ಎಂದು ಅಜ್ಜಿ ತಿಳಿಸಿದ್ದಾರೆ.
Advertisement
ನೀವು ಯಾಕೆ ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಮಾರುತ್ತೀರಾ? ಬೆಲೆ ಹೆಚ್ಚು ಮಾಡಿ ಎಂದು ಅಜ್ಜಿಗೆ ಹೇಳಿದರೆ, ನನಗೆ ದುಡ್ಡು ಮಾಡುವ ಉದ್ದೇಶವಿಲ್ಲ. ಹಸಿದವರಿಗೆ, ಬಡವರಿಗೆ ಆಹಾರ ನೀಡುವುದು ನನ್ನ ಉದ್ದೇಶ. ನಾನು ಬೆಲೆ ಹೆಚ್ಚಿಸಿದರೆ ನನ್ನ ಅಂಗಡಿಗೆ ಬರುವ ಬಡ ಜನರಿಗೆ ಕಷ್ಟವಾಗುತ್ತದೆ. ಪ್ರತಿನಿತ್ಯ 15ರಿಂದ 20 ರೂ. ಹಣ ಕೊಟ್ಟು ತಿನ್ನಲು ಗ್ರಾಹಕರಿಗೂ ಭಾರವಾಗುತ್ತೆ. ಆದ್ದರಿಂದ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಯಾರ ಮೇಲೂ ಅವಲಂಬಿಸದೇ ಇಡ್ಲಿ ಮಾರಾಟ ಮಾಡಿಕೊಂಡು ತನ್ನ ಜೀವನ ಸಾಗಿಸುವುದರ ಜೊತೆಗೆ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.